ಉಡುಪಿಯ ಕೃಷ್ಣ ಮಠದ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ, ವೃದ್ಧೆ ಮತ್ತು ಇರ್ವರು ಅಪ್ರಾಪ್ತ ಮಕ್ಕಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿದ್ದಾರೆ. ಕಾರ್ಯಚರಣೆಯಲ್ಲಿ ಹೊಸಬದುಕು ಆಶ್ರಮದ ವಿನಾಯಚಂದ್ರ, ರಾಜಶ್ರೀ, ಮತ್ತು ಮಕ್ಕಳ ರಕ್ಷಣಾ ಘಟಕದ ಪ್ರಕಾಶ ನಾಯ್ಕ್, ಅಂಬಿಕಾ ಭಾಗಿಯಾಗಿದ್ದರು.

ಒಳಕಾಡುವರು ವೃದ್ಧೆಗೆ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದು, ಹಾಗೆಯೇ ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿ ಸುರಕ್ಷಿತಗೊಳಿಸಿದ್ದಾರೆ. ರಕ್ಷಿಸಲ್ಪಟ್ಟವರು ಅಜ್ಜಿ ಮೊಮ್ಮಕ್ಕಳಾಗಿದ್ದು, ಬಾಗಲಕೋಟೆ ಮೂಲದ ಪಕೀರವ್ವ (75 ವ), ಹನುಮಂತ (10 ವ) ಪ್ರೇಮ (16 ವ) ಎಂದು ತಿಳಿದುಬಂದಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಅನುಸಾರ, ಬಾಲಕಿಗೆ ನಿಟ್ಟೂರು ಬಾಲಕೀಯರ ಬಾಲ ಭವನದಲ್ಲಿ ಹಾಗೂ ಬಾಲಕನನ್ನು ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ತುರ್ತು ಆಶ್ರಯ ನೀಡಲಾಗಿದೆ.
ರಥಬೀದಿ ರಾಘವೇಂದ್ರ ಮಠದ ಬಳಿ, ಅಜ್ಜಿ ಇಬ್ಬರು ಮೊಮ್ಮಕ್ಕಳೊಂದಿಗೆ ಅಳುತ್ತಿದ್ದರು. ಮಾಹಿತಿ ತಿಳಿದ ಒಳಕಾಡು ಅವರು ಸ್ಥಳಕ್ಕೆ ಬಂದು ವಿಚಾರಿಸಿದಾಗ, ವೃದ್ಧೆ ಮೊಮ್ಮಕ್ಕಳ ತಂದೆಯು ಕಳೆದೊಂದು ವರ್ಷದಿಂದ ಮನೆಗೆ ಬಾರದೆ ಕಾಣೆಯಾಗಿದ್ದು, ಮಗನಿಗೆ ಹಡುಕಾಟ ನಡೆಸಲು ಉಡುಪಿಗೆ ಬಂದಿರುವುದಾಗಿ ವೃದ್ಧೆ ಹೇಳಿಕೊಂಡಿದ್ದರು.
