ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಗಳನ್ನು ಬಳಕೆ ಮಾಡಲು ಕಾಯ್ದೆಗೆ ತಿದ್ದುಪಡಿ ತರುವಂತೆ ಆಗ್ರಹಿಸಿ ತುಳುನಾಡು ರಕ್ಷಣಾ ವೇದಿಕೆ ವೈದ್ಯರ ಘಟಕದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಆಯುರ್ವೇದ ವೈದ್ಯರು ಪ್ರತಿಭಟನೆ ನಡೆಸಿದರು.
ತುಳುನಾಡು ರಕ್ಷಣಾ ವೇದಿಕೆ ವೈದ್ಯರ ಘಟಕದಿಂದ ಉಡುಪಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಉಡುಪಿಯಲ್ಲಿ ನಡೆದ ಆಯುರ್ವೇದಿಕ್ ವೈದ್ಯರ ಪ್ರತಿಭಟನೆಯಲ್ಲಿ ತುಳುನಾಡು ರಕ್ಷಣಾ ವೇದಿಕೆ ವೈದ್ಯರ ಘಟಕದ ಜಿಲ್ಲಾಧ್ಯಕ್ಷ ಡಾ ರವೀಂದ್ರ ಮಾತನಾಡಿ, “ಆಯುರ್ವೇದ ಚಿಕಿತ್ಸೆಯು ಅತ್ಯಂತ ಪುರಾತನ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯಾಗಿದ್ದು, ಅದು ಔಷಧ ಮತ್ತು ತತ್ವಶಾಸ್ತ್ರ ಎರಡರ ಸಮ್ಮಿಶ್ರಣವಾಗಿದೆ. ಇದು ಮಾನವನ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯತ್ತಾ ಮುನ್ನಡೆಸುತ್ತದೆ. ಕೊರೊನಾ ಸಂದರ್ಭದಲ್ಲಿ ನಮ್ಮ ಜೀವ ಪಣಕ್ಕಿಟ್ಟು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರಿಗೆ ಹೊಸ ಜೀವನ ಕಲ್ಪಿಸಿದ್ದಲ್ಲದೆ, ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿ ಸೇವೆ ಸಲ್ಲಿಸುತ್ತಿದ್ದೇವೆ” ಎಂದು ಹೇಳಿದರು.
“ನಮ್ಮ ವೈದ್ಯರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಗಳನ್ನು ಬಳಕೆ ಮಾಡಬಾರದು ಎನ್ನುವ ರಾಜ್ಯ ಸರ್ಕಾರದ ಕಾನೂನು ನಮ್ಮ ವೃತ್ತಿ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಆಯುರ್ವೇದ ವೈದ್ಯರುಗಳಿಗೆ (ಬಿಎಎಂಎಸ್) ಅವಶ್ಯಕ ಅಲೋಪತಿ ಔಷಧಗಳನ್ನು ನೀಡಲು ಅನುಮತಿ ನೀಡಿರುತ್ತದೆ” ಎಂದರು.
“ನಮ್ಮ ಆಯರ್ವೇದ ವೈದ್ಯರು ಪದವಿಯನ್ನೇ ಐದೂವರೆ ವರ್ಷ ಕಲಿತು ಸರ್ಕಾರದ ಮಾನ್ಯತೆಯುಳ್ಳ ರಾಜೀವ್‌ಗಾಂಧಿ ಯುನಿವರ್ಸಿಟಿ ಹಾಗೂ ಕೆಎಯುಪಿ ಬೋರ್ಡ್‌ನಲ್ಲಿ ಪದವಿ ಪಡೆದಿರುತ್ತಾರೆ. ಬಿಎಎಂಎಸ್ ಕೋರ್ಸ್‌ನಲ್ಲಿ ಆಯುರ್ವೇದದ ಜೊತೆಗೆ ಮಾಡರ್ನ್ ಮೆಡಿಕಲ್ ಸೈನ್ಸ್ ಕೂಡ ಕಲಿಸಿರುತ್ತಾರೆ. 6 ತಿಂಗಳು ಕಡ್ಡಾಯವಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಟರ್ನ್‌ಶಿಪ್ ಮತ್ತು 6 ತಿಂಗಳು ಆಯುರ್ವೇದ ಚಿಕಿತ್ಸೆ ಪದ್ಧತಿಯಲ್ಲಿ ಇಂಟರ್ನ್‌ಶಿಪ್ ಮಾಡಿರುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಶ್ರಮಿಕರ ಸಮಸ್ಯೆಗಳ ಪರಿಹಾರಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ
“ರಾಜ್ಯದಲ್ಲಿ ಆಯುರ್ವೇದ ವೈದ್ಯರಿಗೆ ಕೆಪಿಎಂಎಎ ಕಾಯ್ದೆಯಡಿಯಲ್ಲಿ ಪರಿವೀಕ್ಷಣೆ ಹೆಸರಿನಲ್ಲಿ ವಿನಾಕಾರಣ ಆಗುತ್ತಿರುವ ಕಿರುಕುಳ ನಿಲ್ಲಿಸಬೇಕು. ಕಾನೂನಿನಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯದ ಆಯುರ್ವೇದ ವೈದ್ಯರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಿಯನ್ನು ಬಳಕೆ ಮಾಡಲು, ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಇತರ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಾನೂನಿನಂತೆ ಡ್ರಗ್ಸ್ ಆಂಡ್ ಕಾಸ್ಮ್ಯಾಟಿಕ್ ಆಕ್ಟ್ (Drugs and Cosmatics Act 1940 Rule 2EE (iii)ರನ್ವಯ ನಮ್ಮ ರಾಜ್ಯದಲ್ಲಿಯೂ ಕೂಡಾ ತಿದ್ದುಪಡಿ ಮಾಡಿ ಜಾರಿಗೆ ತರಬೇಕು. ಕರ್ನಾಟಕ ರಾಜ್ಯ ಆಯುರ್ವೇದ ಯುನಾನಿ ಬೋರ್ಡ್ ಮತ್ತು ಹೋಮಿಯೋಪತಿ ಬೋರ್ಡ್‌ಗಳ ಕಾಯ್ದೆಯಲ್ಲಿ ತಿದ್ದುಪಡಿ ತಂದು ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜೆಪ್ಪು, ಎಎಫ್‌ಐ ಜಿಲ್ಲಾ ಕಾರ್ಯದರ್ಶಿ ಡಾ ಸತೀಶ್ ರಾವ್, ಡಾ ನಾರಾಯಣ್ ಟಿ ಅಂಚನ್, ಡಾ.ಸುನಿತಾ ಶೆಟ್ಟಿ ಸೇರಿದಂತೆ ಇತರರು ಇದ್ದರು.