ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಕುಂಜಾಲು ಜಂಕ್ಷನ್ ಆಟೋ ನಿಲ್ದಾಣದ ಮುಂಭಾಗದ ರಸ್ತೆ ಬದಿಯಲ್ಲಿ ಶನಿವಾರ ತಡರಾತ್ರಿ ಗೋವಿನ ರುಂಡ ಹಾಗೂ ಚರ್ಮ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿಂತೆ ಉಡುಪಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬ್ರಹ್ಮಾವರ ತಾಲೂಕಿನ ಕುಂಜಾಲು ನಿವಾಸಿ ರಾಮ(49), ಪ್ರಸಾದ್ ಕುಂಜಾಲು(21), ನವೀನ್ ಮಟಪಾಡಿ(35), ಕೇಶವ ನಾಯ್ಕ್ ಅಡ್ಜಿಲ(50), ಸಂದೇಶ ಕುಂಜಾಲು(35) ಹಾಗೂ ರಾಜೇಶ್ ಕುಂಜಾಲು(28) ಎಂದು ಗುರುತಿಸಲಾಗಿದೆ. 7ನೇ ಆರೋಪಿ ತಲೆಮರೆಸಿಕೊಂಡಿರುತ್ತಾನೆ ಎಂದು ಉಡುಪಿ ಜಿಲ್ಲಾ ಎಸ್‌ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಕುಂಜಾಲು ಜಂಕ್ಷನ್ ಆಟೋ ನಿಲ್ದಾಣದ ಮುಂಭಾಗದ ರಸ್ತೆ ಬದಿಯಲ್ಲಿ ಕಳೆದ ಶನಿವಾರ ತಡರಾತ್ರಿ ಗೋವಿನ ರುಂಡ ಹಾಗೂ ಚರ್ಮ ಪತ್ತೆಯಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು, ವಿವಿಧ ಸಂಘಟನೆಯ ಮುಖಂಡರು ಕೋಮು ಸೌಹಾರ್ದತೆಗೆ ಧಕ್ಕೆ ಬಾರದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣದ ಪತ್ತೆಗಾಗಿ ಬ್ರಹ್ಮಾವರ ವೃತ್ತ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಒಟ್ಟು 4 ತಂಡಗಳನ್ನು ರಚಿಸಿ, ವಿವಿಧ ಅಯಾಮಗಳಲ್ಲಿ ತನಿಖೆಯನ್ನು ನಡೆಸಿದಾಗ ಆರೋಪಿಗಳ ವಿವರ ಪತ್ತೆಯಾಗಿದೆ.
ಇದನ್ನು ಓದಿದ್ದೀರಾ? ಉಡುಪಿ | ಬ್ರಹ್ಮಾವರದ ಕುಂಜಾಲುವಿನಲ್ಲಿ ಗೋವಿನ ರುಂಡ ಪತ್ತೆ, ಏನಿದು ಪ್ರಕರಣ?
ಆರೋಪಿಗಳು ದನವನ್ನು ಕಡಿದು ಅದರ ಅವಶೇಷಗಳನ್ನು ವಾಹನದಲ್ಲಿ ಸಾಗಿಸುವಾಗ ಅದರ ಕೆಲವು ಅವಶೇಷಗಳು ರಸ್ತೆಯಲ್ಲಿ ಬಿದ್ದು ಹೋಗಿರುವುದಾಗಿ ತನಿಖೆಯ ವೇಳೆ ಬಗ್ಗೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಬಳಸಿದ ಹೊಂಡ ಆಕ್ಟಿವಾ KA20 EV 6377 ಹಾಗೂ KA21 M 8071 ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್‌ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಪ್ರದೀಪ್ ಎಂಬುವವರು ಕಳೆದ ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ಕುಂಜಾಲ್ ಜಂಕ್ಷನ್ ಬಳಿ ಸುಮಾರು 11.30ಕ್ಕೆ ನಿಲ್ದಾಣದ ಎದುರು ರಸ್ತೆ ಮಧ್ಯದಲ್ಲಿ ಯಾರೋ ಅಪರಿಚಿಕರು ಗೋವಿನ ತಲೆ ಮತ್ತು ಚರ್ಮದ ಭಾಗವನ್ನು ಹಾಕಿರುವುದನ್ನು ಗಮನಿಸಿದ್ದರು. ಬಳಿಕ ಅವರು ಬ್ರಹ್ಮಾವರದ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ರಾಜಕೀಯ, ಕೋಮು ಸಂಘರ್ಷಕ್ಕೆ ಯತ್ನಿಸುತ್ತಿದ್ದ ಬಿಜೆಪಿ, ಸಂಘಪರಿವಾರಕ್ಕೆ ಹಿನ್ನಡೆ
ಕುಂಜಾಲು ಜಂಕ್ಷನ್ ಆಟೋ ನಿಲ್ದಾಣದ ಮುಂಭಾಗದ ರಸ್ತೆ ಬದಿಯಲ್ಲಿ ಶನಿವಾರ ತಡರಾತ್ರಿ ಗೋವಿನ ರುಂಡ ಹಾಗೂ ಚರ್ಮ ಪತ್ತೆಯಾದ ಘಟನೆಯನ್ನಿಟ್ಟುಕೊಂಡು ಕೋಮು ಸಂಘರ್ಷಕ್ಕೆ ಯತ್ನಿಸುತ್ತಿದ್ದ ಬಿಜೆಪಿ, ಸಂಘಪರಿವಾರಕ್ಕೆ ಹಿನ್ನಡೆಯಾಗಿದೆ.
ಉಡುಪಿಯ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಸಭೆ ನಡೆಸಿ ಅಮಾನುಷ ಕೃತ್ಯ ನಡೆಸಿದ ವ್ಯಕ್ತಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆಯ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಬ್ರಹ್ಮಾವರ ಪರಿಸರದಲ್ಲಿ ಇದೇ ರೀತಿ ಘಟನೆಗಳು ಈ ಹಿಂದೆ ನಡೆದರೂ ಪೊಲೀಸ್ ಇಲಾಖೆ ಯಾವುದೇ ವ್ಯಕ್ತಿಗಳನ್ನು ಬಂಧಿಸಿಲ್ಲ. ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ಗೋ ಕಳ್ಳತನ ಜಾಲವನ್ನು ತಕ್ಷಣ ಪತ್ತೆಹಚ್ಚಿ ಮಟ್ಟಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದರು.
ಈಗ ಆರೋಪಿಗಳ ಹೆಸರನ್ನು ಉಡುಪಿ ಜಿಲ್ಲಾ ಪೊಲೀಸರು ಬಹಿರಂಗಗೊಳಿಸುತ್ತಿದ್ದಂತೆಯೇ ಬಿಜೆಪಿ, ಸಂಘಪರಿವಾರಕ್ಕೆ ಹಿನ್ನಡೆಯಾಗಿದೆ.