ಸಮಾನ ಕೆಲಸ ಸಮಾನ ವೇತನ ಎನ್ನುವ ಸಂವಿಧಾನಬದ್ಧ ಹಕ್ಕು ಸದ್ಯ ರಾಜ್ಯದಲ್ಲಿ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದ್ದು, ಅತ್ಯಂತ ದೊಡ್ಡ ಸಮಸ್ಯೆ ಆಗಿರುವ ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್)ಯನ್ನು ಕೂಡಲೇ ಹಳೆ ಪಿಂಚಣಿ ಯೋಜನೆ(ಒಪಿಎಸ್)ಗೆ ವರ್ಗಾಯಿಸಿ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಮಾತನಾಡಿದ ಅವರು, “ಶಿಕ್ಷಣ ಇಲಾಖೆಯಲ್ಲಿ ಬಡ್ತಿ ಹಾಗೂ ಪಿಂಚಣಿ ವ್ಯವಸ್ಥೆ ಮಾತ್ರವಲ್ಲದೆ ಸಂಬಳದಲ್ಲೂ ಕೂಡ ತಾರತಮ್ಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ 40 ವರ್ಷಗಳಿಂದ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಮತ್ತು ನೌಕರರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಪಿಂಚಣಿ ಸಂವಿಧಾನಬದ್ಧ ಹಕ್ಕು ಎನ್ನುವುದನ್ನು ಸುಪ್ರೀಂ ಕೋರ್ಟ್ ಈಗಾಗಲೇ ಅನೇಕ ಆದೇಶಗಳ ಮೂಲಕ ವ್ಯಾಖ್ಯಾನಿಸಿದೆ” ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ “ವೋಟ್ ಫಾರ್ ಎನ್‌ಪಿಎಸ್ ಎನ್ನುವ ಪ್ರಣಾಳಿಕೆಯ ಮೂಲಕ ಮತ ಪಡೆದು ಅಭೂತಪೂರ್ವ 135 ಸ್ಥಾನಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಒಪಿಎಸ್ ಪದ್ದತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.
“ಈ ದೇಶದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೈಕೋರ್ಟ್ ನ್ಯಾಯಾಧೀಶರು ಶಾಸಕರು ಸೇರಿದಂತೆ ಎಲ್ಲರೂ ಪಿಂಚಣಿಗೆ ಅರ್ಹರಾಗಿದ್ದಾರೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಮಾತ್ರ ತಾರತಮ್ಯ ನಡೆಯುತ್ತಿದ್ದು, ಶಿಕ್ಷಕರ ಭರ್ತಿ, ವೇತನ ತಾರತಮ್ಯ, ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮಾನ್ಯತೆ ನವೀಕರಣ, ಪಾಲಿಟೆಕ್ನಿಕ್ ಐಟಿಐ ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆಗಳು, ವಸತಿ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಬಗ್ಗೆ ಕೂಡಲೇ ಶಿಕ್ಷಣ ಇಲಾಖೆಯ ಸಚಿವರುಗಳು ತಮ್ಮ ಅಧಿಕಾರಿಗಳೊಂದಿಗೆ ಶಿಕ್ಷಣ ಮತ್ತು ಪದವೀಧರ ಕ್ಷೇತ್ರದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ಅಧಿವೇಶನದಲ್ಲಿ ಸರ್ಕಾರಕ್ಕೆ ಶಿಕ್ಷಕರ ಮೇಲಿನ ತಾರತಮ್ಯ ನೀತಿ ತಿರುಗುಬಾಣವಾಗಿ ಪರಿಣಮಿಸಲಿದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಬಹುತ್ವ ಗಟ್ಟಿಗೊಳಿಸುವುದೇ ಮೇ ಸಾಹಿತ್ಯ ಮೇಳದ ಮುಖ್ಯ ಉದ್ದೇಶ: ಬಸವರಾಜ ಸೂಳಿಬಾವಿ
ಈ ಸಂದರ್ಭದಲ್ಲಿ ಜೆಡಿಎಸ್‌ನ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ಮುಖಂಡ ಹುಸೇನ್ ಹೈಕಾಡಿ, ಪಕ್ಷದ ಮುಖಂಡರುಗಳು, ವಿವಿಧ ಶಿಕ್ಷಕರ ಸಂಘಗಳ ಪ್ರಮುಖರು ಇದ್ದರು.
