ಉಡುಪಿಯ ಖಾಸಗಿ ಕಾಲೇಜಿನ ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಯನ್ನು ಬದಲಾಯಿಸಲಾಗಿದೆ. ತನಿಖಾಧಿಕಾರಿಯನ್ನು ಬದಲಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಆದೇಶ ಹೊರಡಿಸಿದ್ದಾರೆ.
ಪ್ರಕರಣವನ್ನು ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ ಗೌಡ ತನಿಖೆ ನಡೆಸುತ್ತಿದ್ದರು. ಇದೀಗ, ಪ್ರಕರಣವನ್ನು ಅವರಿಂದ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರಿಗೆ ಹಸ್ತಾಂತರಿಸಲಾಗಿದೆ. ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಇಟ್ಟು, ವಿದ್ಯಾರ್ಥಿಯೊಬ್ಬರ ಖಾಸಗಿ ವಿಡಿಯೋವನ್ನು ಮೂವರು ವಿದ್ಯಾರ್ಥಿಯರು ಚಿತ್ರೀಕರಿಸಿದ್ದರು. ಆ ಪ್ರಕರಣಕ್ಕೆ ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಸಂಘಟನೆಗಳು ಕೋಮು ಬಣ್ಣ ಬಳಿಯಲು ಯತ್ನಿಸಿದ್ದರು. ಮಹಿಳಾ ಆಯೋಗದ ಸದಸ್ಯ, ನಟಿ ಖುಷ್ಬೂ ಸುಂದರ್ ಕೂಡ ಉಡುಪಿಗೆ ಭೇಟಿ ನೀಡಿ, ತನಿಖೆ ನಡೆಸಿದ್ದರು. ಕಾಲೇಜಿನಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಅಳವಡಿಸಲಾಗಿಲ್ಲ ಎಂದು ಖುಷ್ಬೂ ಅವರೂ ಹೇಳಿದ್ದರು. ಬಳಿಕ, ಅವರ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಟೀಕೆ ಮಾಡಿದ್ದರು.