ವಿದ್ಯಾರ್ಥಿಗಳು ಸಾಧನೆಯೊಂದಿಗೆ ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಗೂ ಮುಂಬೈ ಜಾನ್ ಡಿಸಿಲ್ವಾ ಫೌಂಡೇಶನ್ ವತಿಯಿಂದ ಅಂಬಾಗಿಲು ಕಕ್ಕುಂಜೆಯ ಅನುಗ್ರಹ ಪಾಲನಾ ಕೇಂದ್ರದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪರಿಶ್ರಮ ಹಾಗೂ ಪೋಷಕರ ತ್ಯಾಗದ ಫಲವಾಗಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಜೀವನದ ಪ್ರತಿ ಘಟ್ಟದಲ್ಲಿ ಮೌಲ್ಯಗಳನ್ನು ಕಡೆಗಣಿಸದೆ, ಆದರ್ಶ ಸಮಾಜ ಕಟ್ಟುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗುವ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದರು.
ದಿಕ್ಸೂಚಿ ಭಾಷಣ ಮಾಡಿದ ಉತ್ತರ ಕನ್ನಡ ಡಿವೈಎಸ್ಪಿ ವೆಲಂಟಿನ್ ಡಿಸೋಜಾ, ಪ್ರತಿಭೆ ಎಂಬುದು ಪ್ರತಿಯೊಬ್ಬರಲ್ಲೂ ಅಡಕವಾಗಿದ್ದು, ಅದನ್ನು ನಾವು ಮೊದಲು ಕಂಡುಕೊಳ್ಳಬೇಕಿದೆ. ಆ ಕ್ಷೇತ್ರದಲ್ಲಿ ಮುಂದುವರಿದಾಗ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯ. ಪ್ರತಿಭೆಯ ಹಿಂದೆಯೇ ಪ್ರಗತಿ ಇದೆ. ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಮುನ್ನುಗ್ಗಬೇಕು ಎಂದರು.
ಮುಂಬೈಯ ಜಾನ್ ಡಿಸಿಲ್ವಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಕಳೆದ ಸಾಲಿನಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಎಂಜಿನಿಯರಿಂಗ್‌ನಲ್ಲಿ ಪಿಹೆಚ್‌ಡಿ ಪಡೆದ ಎಲ್ಟ್ರೀನ್ ವಾಸ್ ಉದ್ಯಾವರ, ಸಿಎ ಪರೀಕ್ಷೆಯಲ್ಲಿ ಸಾಧನೆ ಮಾಡಿದ ನಿಕೋಲಾ ಡಾಯಸ್ ಬೈಂದೂರು, ರಸ್ಸೆಲ್ ಮಾರ್ಟಿಸ್ ಶಂಕರಪುರ ಇವರಿಗೆ ಗೌರವಿಸಲಾಯಿತು.
ಇದನ್ನು ಓದಿದ್ದೀರಾ? ಕರಾವಳಿ | ಸಂಘಪರಿವಾರದ ವಿವಾದದ ನಡುವೆಯೂ ಮುಸ್ಲಿಮರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಹಿಂದೂಗಳು
ಕಾರ್ಯಕ್ರಮದ ಸಂಚಾಲಕರಾದ ಡಾ. ಜೆರಾಲ್ಡ್ ಪಿಂಟೊ ವಿದ್ಯಾರ್ಥಿಗಳಿಗೆ ಯಪಿಎಸ್ಸಿ, ಕೆಪಿಎಸ್ಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೊ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಫೌಂಡೇಶನ್ ಅಧ್ಯಕ್ಷ ಜಾನ್ ಡಿಸಿಲ್ವಾ, ಗ್ಲ್ಯಾಡಿಸ್ ಡಿಸಿಲ್ವಾ, ಕಥೊಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿಸೋಜಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆ್ನಾಂಡಿಸ್, ಆಲ್ಫೋನ್ಸ್ ಡಿಕೊಸ್ತಾ ಉಪಸ್ಥಿತರಿದ್ದರು. ಸಂತೋಷ್ ಕರ್ನೆಲಿಯೋ ಸ್ವಾಗತಿಸಿ, ಒಲಿವೀಯಾ ಡಿಮೆಲ್ಲೊ ವಂದಿಸಿದರು. ಲೋಯ್ಡ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.
