ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಮೂಲಕ ಘೋಷಿಸಿರುವ ಹಲವಾರು ಸೌಲಭ್ಯಗಳನ್ನು ಪಡೆಯಲು ಸಾರಿಗೆ ಕಾರ್ಮಿಕರ ಕಾರ್ಡ್ ಪಡೆಯಲು ಮಾಹಿತಿ ಕೊಡುವ ಉದ್ದೇಶದಿಂದ ಅಕ್ಟೋಬರ್ 20ರಂದು ಬೆಳಗ್ಗೆ ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಕಾರ್ಮಿಕರ ಬೃಹತ್ ಸಮಾವೇಶ ನಡೆಸಲು ಸಿಐಟಿಯು ಸಂಚಲನ ಸಮಿತಿ ನಿರ್ಧರಿಸಿದೆ.
ಸಾರಿಗೆ ಕಾರ್ಮಿಕರಿಗೆ ಪಿಂಚಣಿ, ಅಪಘಾತ ಪರಿಹಾರ, ವೈದ್ಯಕೀಯ ಸೌಲಭ್ಯ,ಸಾರಿಗೆ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಪಡೆಯಲು ಮಂಡಳಿಗೆ ನೋಂದಾಯಿಸಿ ಅವರ ಕುಟುಂಬಗಳಿಗೆ ಭದ್ರತೆ ಒದಗಿಸಲು ಈ ಸಮಾವೇಶ ನಡೆಯಲಿದೆ.
ಅಂಬೇಡ್ಕರ್ ಸಹಾಯ ಹಸ್ತ ನೋಂದಣಿ
ಕಾರ್ಮಿಕ ಇಲಾಖೆಯು ಹಮಾಲರು, ಟೈಲರ್‌ಗಳು, ಅಗಸರು, ಹೋಟೆಲ್ ಕಾರ್ಮಿಕರು, ಫೋಟೋಗ್ರಾಫರ್, ಕಲ್ಯಾಣ ಮಂಟಪದಲ್ಲಿ ದುಡಿಯುವ ಕೆಲಸಗಾರರು, ಬೀದಿ ಬದಿ ವ್ಯಾಪಾರಸ್ಥರು, ದಿನ ಪತ್ರಿಕೆ ವಿತರಕರು, ಮನೆಗೆಲಸಗಾರರು ಮುಂತಾದವರಿಗೆ ಅಂಬೇಡ್ಕರ್ ಸಹಾಯ ಹಸ್ತ ಎಂಬ ಹೆಸರಿನಲ್ಲಿ ನೋಂದಣಿ ಮಾಡಿ ಕಾರ್ಮಿಕ ಕಾರ್ಡ್ ಪಡೆಯಲು ಮಾಹಿತಿ ಇದೇ ಸಂದರ್ಭದಲ್ಲಿ ನೀಡಲಾಗುತ್ತದೆ ಎಂದು ಸಿಐಟಿಯು ತಿಳಿಸಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಮಾಹಿತಿ ತಂತ್ರಜ್ಞರ ಸೇವೆ ಪಡೆಯಲು ಅರ್ಜಿ ಆಹ್ವಾನ
ಆದ್ದರಿಂದ ಈ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರು ಈ ಸಮಾವೇಶದಲ್ಲಿ ಪಾಲ್ಗೊಂಡು ಸರಕಾರದ ಸೌಲಭ್ಯಗಳನ್ನು ಪಡೆಯಬೇಕು ಎಂದು ಸಿಐಟಿಯು ಸಂಚಲನ ಸಮಿತಿ ಸಂಚಾಲಕರಾದ ಚಂದ್ರಶೇಖರ ವಿ, ಕೆಲಸಗಾರರ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ, ಸಿಐಟಿಯು ಉಡುಪಿ ಜಿಲ್ಲಾ ಮುಖಂಡರಾದ ಎಚ್ ನರಸಿಂಹ ಹೇಳಿಕೆಯಲ್ಲಿ ತಿಳಿಸಿದ್ದಾರೆ.
