ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈವರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ಅಮಾನತು ಮಾಡಲಾಗಿದೆ.
ಪ್ರಕರಣದಲ್ಲಿ ಸರಿಯಾಗಿ ಮಾಹಿತಿ ಸಂಗ್ರಹಿಸಿದೆ ನಿರ್ಲಕ್ಷಿಸಿದ ಆರೋಪದ ಮೇಲೆ ಮಲ್ಪೆ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸುರೇಶ್ ಮತ್ತು ಕಾನ್‌ಸ್ಟೇಬಲ್ ನಾಗರಾಜ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಮಾರ್ಚ್ 19ರಂದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೀಗ, ಲೀಲಾ ಮತ್ತು ಪಾರ್ವತಿ ಎಂಬ ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ.
ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ಮಹಿಳಾ ಆಯೋಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಗುರುವಾರ ಸೂಚಿಸಿದೆ.
ಪ್ರಕರಣದ ಹಿನ್ನೆಲೆ;
ಮೀನು ಕದ್ದ ಆರೋಪದ ಮೇಲೆ ವಿಜಯನಗರ ಜಿಲ್ಲೆ ಮೂಲದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದ ವಿಡಿಯೋ ಮಾರ್ಚ್ 18ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಹಲ್ಲೆಗೊಳಗಾದ ಮಹಿಳೆ ಕಡೆಯವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಬಿಎನ್‌ಎಸ್ ಸೆಕ್ಷನ್ 74, 115, 351,352, ಮತ್ತು ದಲಿತ ದೌರ್ಜನ್ಯ (ತಡೆ) ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಾದ ಲಕ್ಷ್ಮಿಬಾಯಿ, ಸುಂದರ್, ಶಿಲ್ಪಾ ಮತ್ತು ಇನ್ನೊಬ್ಬರನ್ನು ಮಾರ್ಚ್ 19ರಂದು ಬಂಧಿಸಿದ್ದರು.
ಈ ವರದಿ ಓದಿದ್ದೀರಾ?: ಮಹಾಡ್ ಸತ್ಯಾಗ್ರಹ | ಚವದಾರ್ ನೀರು ಮುಟ್ಟಿ, ಮನುಸ್ಮೃತಿ ಸುಟ್ಟ ಮೊದಲ ದಲಿತ ಬಂಡಾಯ
“ವಿಡಿಯೋ ಪರಿಶೀಲಿಸಿ, ಪ್ರಕರಣದಲ್ಲಿ ಇನ್ನು ಯಾರದ್ದಾದರು ಪಾತ್ರ ಇದ್ದರೆ ಆದಷ್ಟು ಬೇಗ ಅವರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಉಡುಪಿ ಎಸ್ಪಿ ಡಾ.ಕೆ ಅರುಣ್ ಹೇಳಿದ್ದರು.
ಮಾರ್ಚ್ 22ರಂದು ಪ್ರತಿಭಟನೆ;
“ದಲಿತ ಮಹಿಳೆ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿಲ್ಲ. ಅದು ಕ್ಷಣಿಕ ಸಿಟ್ಟಿನಿಂದ ಆಗಿದ್ದು. ರಾಜಿ ಮೂಲಕ ವಿವಾದ ಇತ್ಯರ್ಥಪಡಿಸಿಕೊಂಡಿದ್ದರೂ, ಪ್ರಕರಣ ದಾಖಲಿಸಿ ಬಡ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಮಾರ್ಚ್ 22ರಂದು ಸ್ವಇಚ್ಚೆಯಿಂದ ಮೀನುಗಾರಿಗೆ ಸ್ಥಗಿತಗೊಳಿಸಿ ಬಂದರಿನಲ್ಲಿ ಎಲ್ಲಾ ಮೀನುಗಾರರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಘ ತಿಳಿಸಿದೆ ಎಂದು ವರದಿಗಳು ಹೇಳಿವೆ.