ದಲಿತ ಕುಟುಂಬದ ಮನೆಗೆ ತೆರಳುವ ಸರಕಾರಿ ರಸ್ತೆಯನ್ನು (ಉದ್ಯಾವರ ಗ್ರಾಮದ ಪಿತ್ರೋಡಿ ) ಅತಿಕ್ರಮಣ ಮಾಡಿರುವ ಬಗ್ಗೆ ತಾಲ್ಲೂಕು ಮೋಜಣಿದಾರರು ಒತ್ತುವರಿ ಖಚಿತಪಡಿಸಿ ನಕ್ಷೆ ಸಹಿತ ವರದಿ ನೀಡಿದ್ದರೂ, ಮುಕ್ತ ಸಂಚಾರವನ್ನು ಪ್ರತಿಬಂಧಿಸಿ ದಲಿತ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಒತ್ತುವರಿ ತೆರವುಗೊಳಿಸದೆ ಗಂಭೀರ ಕರ್ತವ್ಯಲೋಪ ಎಸಗಿದ ಉಡುಪಿ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷರಾದ ಸಂಜೀವ ಬಳ್ಕೂರು ಅವರು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರನ್ನು ಆಗ್ರಹಿಸಿದರು.
ಬೈಂದೂರು ತಾಲ್ಲೂಕು ನಾಡ ಗ್ರಾಮದಲ್ಲಿ ಹಲವು ದಶಕಗಳು ಕಳೆದರೂ ಸರಕಾರಿ ಜಮೀನು ಮಂಜೂರಾತಿಯಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಲಭ್ಯ ಸರಕಾರಿ ಜಮೀನುಗಳಲ್ಲಿ ಶೇ. 50 ರಷ್ಟನ್ನು ದಲಿತರಿಗೆ ಮೀಸಲಿಡುವಂತೆ ಅವರು ಈ ಸಂದರ್ಭ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್, ಬೈಂದೂರು ವಲಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಮಿತಿಯ ಮುಖಂಡರಾದ ನಾಗರತ್ನ ನಾಡ, ರಂಗನಾಥ ಕೊರಂಗರಪಾಡಿ, ನಾಗರತ್ನ ಆರ್., ನಾಡ ಗ್ರಾಮದ ಭೂ ರಹಿತ ದಲಿತ ಮಹಿಳೆಯರು ಉಪಸ್ಥಿತರಿದ್ದರು.