ಅಸಂಘಟಿತ ಕಾರ್ಮಿಕರು ಸರಕಾರದಿಂದ ದೊರಕುವ ಸೌಲಭ್ಯತೆಗಳ ಮಾಹಿತಿಯ ಕೊರತೆಯಿಂದ ಅವುಗಳನ್ನು ಪಡೆದುಕೊಳ್ಳುವಲ್ಲಿ ವಂಚಿತರಾಗುತ್ತಾರೆ. ವೃತ್ತಿಪರ ಸಂಘಟನೆಗಳು ಶಿಬಿರಗಳನ್ನು ಕಾರ್ಯಗಾರವನ್ನು ಸಂಯೋಜಿಸಿ ಅವುಗಳನ್ನು ಸೂಕ್ತ ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತವೆ ಎಂದು ಶಾಸಕರಾದ ಸುವರ್ಣ ಅವರು ಅಭಿಮತ ವ್ಯಕ್ತ ಪಡಿಸಿದರು. ಅವರು ಭಾನುವಾರ ಉಡುಪಿಯ ಬೈಲೂರಿನ ಆಶಾನಿಲಯದಲ್ಲಿ ಜಿಲ್ಲಾ ಗ್ಯಾರೇಜು ಮಾಲಕರ ಮಹಾಸಭೆ ಮತ್ತು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ ರಾಜ್ಯ ಸರಕಾರವು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಹಾಗೆ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಹಲವಾರು ವರ್ಷಗಳ ಬೇಡಿಕೆಯಾದ ಸಂಘಕ್ಕೆ ನಿವೇಶನವನ್ನು ದೊರಕಿಸಿ ಕೊಡುವ ಬಗ್ಗೆ ಕಾರ್ಮಿಕರ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ವಿಶೇಷ ಪ್ರಯತ್ನವನ್ನು ನಡೆಸುತ್ತೇನೆ ಎಂದು ಭರವಸೆಯನ್ನು ನೀಡಿದರು.
ಗ್ಯಾರೇಜ್ ಕ್ಷೇತ್ರದಲ್ಲಿ ಐದು ದಶಕಗಳಗಿಂತಲೂ ಹೆಚ್ಚು ಸಾಧನೆಯನ್ನು ಸೇವೆಯನ್ನು ಮಾಡಿದಂತಹ ಉಡುಪಿಯ ಕ್ರಿಷ್ಟಿ ಕರ್ಕಡ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕುಂದಾಪುರ ತಾಲೂಕಿನ ಸಂಚಾಲಕರಾದ ನಾರಾಯಣ ಆಚಾರ್ಯ, ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಇದರ ನಿರ್ದೇಶಕರಾಗಿ ಆಯ್ಕೆಯಾದ ಶ್ರೀ ಕೃಷ್ಣಯ್ಯ ಮದ್ದೋಡಿಯವರುಗಳನ್ನು ಸನ್ಮಾನಿಸಲಾಯಿತು.
ಅಲ್ವಿಶಾ ಸಿಲ್ವಸ್ಟರ್ ಡಿಸೋಜ, ಸೋಹನ್ ದೇವರಾಜ್ ಸುವರ್ಣ, ಭವೇಶ್ ಜಯರಾಜ್ ಸುವರ್ಣ, ಕೃಪಾ ಕೃಷ್ಣ ಆಚಾರ್ಯ ಕಾಪು, ಸ್ವಯಂಪ್ರಕಾಶ್ ರವೀಂದ್ರ ಶೇಟ್. ಹರ್ಷಿತಾ ರಮೇಶ್ ದೇವಾಡಿಗ ಇವರುಗಳನ್ನು ಶೈಕ್ಷಣಿಕ ಸಾಧನೆಗಾಗಿ ಪುರಸ್ಕರಿಸಲಾಯಿತು. ಸಂಕಷ್ಟಕ್ಕೆಡಾದ ಸದಸ್ಯರಿಗೆ ಸಹಾಯಧನ ವಿತರಿಸಲಾಯಿತು.
ಗಣೇಶ್ ಜಿ ಅವರು ಇಎಸ್ಐ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ಅಂಚೆ ಇಲಾಖೆಯಿಂದ ಆಧಾರ್ ತಿದ್ದುಪಡಿ ಮತ್ತು ಅಂಚೆ ವಿಮಾ ಯೋಜನೆಗಳ ನೋಂದಣಿ ನಡೆಸಲಾಯಿತು.
ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಕಾರ್ಮಿಕ ನಿರೀಕ್ಷಕ ವಿಜಯೇಂದ್ರ, ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರದ ಆಡಳಿತ ಅಧಿಕಾರಿ ಡಾ.ಕಾಂತರಾಜ್ ಎ ಎನ್, ಸಂಘದ ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ, ಚೇರ್ಮನ್ ವಿಲ್ಸನ್ ಅಂಚನ್, ಗೌರವ ಸಲಹೆಗಾರರಾದ ಯಾದವ ಶೆಟ್ಟಿಗಾರ್, ಉದಯ್ ಕಿರಣ್, ಜಯ ಸುವರ್ಣ, ಉಪಾಧ್ಯಕ್ಷರಾದ ರಾಜೇಶ್ ಜತ್ತನ್, ವಿನಯ್ ಕುಮಾರ್ ಕಲ್ಮಾಡಿ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಚೇರ್ಮನ್ ದಿವಾಕರ್ ಎಂ, ಅಧ್ಯಕ್ಷರಾದ ದಿನಕರ್ ಕುಲಾಲ್, ಉದ್ಯಮಿ ವೈ ಸುಕುಮಾರ್ ಶೆಟ್ಟಿ, ಸರ್ವೆಯರ್ ನವೀನ್ ಚಂದ್ರ ಸುವರ್ಣ ಮತ್ತಿತರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಶಾಧಿಕಾರಿ ಸಂತೋಷ ಕುಮಾರ ಸ್ವಾಗತಿಸಿ ಯೋಗೀಶ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ವಿನಯ್ ವಂದಿಸಿದರು.
