ಕಳೆದ ಇಪ್ಪತ್ತು ವರ್ಷಗಳಿಂದ, ಮನೆಯವರ ಸಂಪರ್ಕಕ್ಕೆ ಸಿಗದೆ, ದೂರ ಉಳಿದುಕೊಂಡಿದ್ದ ವೃದ್ಧರನ್ನು ಮನೆ ಮಂದಿಗೆ ಹಸ್ತಾಂತರಿಸುವಲ್ಲಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ, ಹಾಗೂ ಹೊಸಬದುಕು ಆಶ್ರಮ, ಮತ್ತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಯಶಸ್ವಿಯಾಗಿದೆ.
ನಲವತ್ತು ದಿನಗಳ ಹಿಂದೆ, ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ವೃದ್ಧರೊಬ್ಬರು ಯಾತ್ರಿಕರಲ್ಲಿ ಭಿಕ್ಷೆ ಯಾಚಿಸುತ್ತಿರುವುದನ್ನು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಗಮನಿಸಿದ್ದರು. ವಿಚಾರಿಸಿದಾಗ ಜೀವನ ನಿರ್ವಹಣೆಗೆ ಅಸಹಾಯಕತೆ ಎದುರಾಗಿರುವುದರಿಂದ, ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದನೆಂದು, ವೃದ್ಧರು ಒಳಕಾಡು ಅವರಲ್ಲಿ ಹೇಳಿಕೊಂಡರು. ಭಿಕ್ಷಾಟನೆ ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ವೃದ್ಧರ ಮನವೊಲಿಸಿದ ಒಳಕಾಡುವರು, ಬಳಿಕ ಕೋರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು.
ಆಶ್ರಮದ ಸಂಚಾಲಕ ವಿನಯಚಂದ್ರ ಅವರು, ಅದೇಷ್ಟೋ ದಿನಗಳಿಂದ ಸ್ನಾನಾದಿಗಳಿಂದ ದೂರ ಉಳಿದಿದ್ದ ವೃದ್ಧರನ್ನು ಶುಚಿಗೊಳಿಸಿ, ಪೌಷ್ಟಿಕ ಆಹಾರ ಒದಗಿಸಿ ಸಧೃಡವಾಗಿಸಿದರು. ಬಳಿಕ ವೃದ್ಧರ ಪೂರ್ವಾಪರಗಳನ್ನು ಕಲೆ ಹಾಕಿದಾಗ, ವೃದ್ಧರು ಕುಂದಾಪುರ ಭಾಗದವರೆಂದು, ಹೆಸರು ನಾರಾಯಣ ಎಂದು ತಿಳಿದುಬಂದಿತು. ಬಳಿಕ ಒಳಕಾಡುವರು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳ ನೆರವು ಪಡೆದು, ಅವರ ಮೂಲಕ ವೃದ್ಧರ ಸಂಬಂಧಿಕರನ್ನು ಆಶ್ರಮಕ್ಕೆ ಬರಮಾಡಿಸಿ ವೃದ್ಧರನ್ನು ಸಂಬಂಧಿಕರಿಗೆ ಒಪ್ಪಿಸಿದರು. ವೈಮನಸ್ಸಿನಿಂದಆಗಿ ವೃದ್ಧರು ಮನೆ ತ್ಯಜಿಸಿದ್ದರೆಂದು ತಿಳಿದುಬಂದಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಯೋಜನಾ ಸಂಯೋಜಕಿ ಅಶ್ವಿನಿ, ಆಪ್ತ ಸಮಾಲೋಚಕ ರೋಶನ್ ಅಮೀನ್ ಭಾಗಿಯಾಗಿದ್ದರು.
