ಉಡುಪಿ ಜಿಲ್ಲಾದ್ಯಂತ ಭತ್ತ ಕಟಾವು ಯಂತ್ರಗಳು ಗಂಟೆಗೆ ₹2,400ಕ್ಕೂ ಅಧಿಕ ದರ ವಸೂಲಿ ಮಾಡುತ್ತಿರುವುದು, ರೈತರನ್ನು ಲೂಟಿ ಮಾಡುವುದಾಗಿದೆ. ಜಿಲ್ಲಾಧಿಕಾರಗಳು ಕೂಡಲೇ ಮಧ್ಯ ಪ್ರವೇಶಿಸಿ ಘಂಟೆಗೆ ವೈಜ್ಞಾನಿಕವಾಗಿ ಗರಿಷ್ಠ ದರ ನಿಗದಿ ಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರೈತ ಮುಖಂಡ ಚಂದ್ರಶೇಖರ್ ವಿ ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ಭತ್ತ ಕಟಾವು ಮಾಡುವ ಯಂತ್ರಗಳಿಗೆ ವೈಜ್ಞಾನಿಕ ದರ ನಿಗದಿಪಡಿಸುವಂತೆ ಉಡುಪಿ ಪಟ್ಟಣದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕರ್ನಾಟಕ ಪ್ರಾಂತ ರೈತ ಸಂಘವು ಕಳೆದ ಒಂದು ತಿಂಗಳ ಹಿಂದೆ ಈ ಸಮಸ್ಯೆ ಬಗೆಹರಿಸಲು ಮನವಿ ನೀಡಿದರೂ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ಅಧಿಕಾರಿಗಳ ನಿರ್ಲಕ್ಷ್ಯತೆ ಎದ್ದುಕಾಣುತ್ತಿದೆ. ರೈತರಿಂದ ಹೆಚ್ಚುವರಿ ದರ ವಸೂಲಿ ಮಾಡುವ ಯಂತ್ರದ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಕ್ರಮವಹಿಸುತ್ತಿಲ್ಲ” ಎಂದು ಆರೋಪಿಸಿದರು.
“ಕೃಷಿ ಕೇಂದ್ರಗಳ ಮೂಲಕ ಭತ್ತ ಕಟಾವು ಯಂತ್ರ ಒದಗಿಸಲು ಮುಂದಾಗಬೇಕು. ಹಾಗೆಯೇ ಕೂಡಲೇ ಎಲ್ಲ ತಾಲೂಕು ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕು. ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು” ಎಂದು ಚಂದ್ರಶೇಖರ್ ವಿ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅರೆಬೆತ್ತಲೆ ಮೆರವಣಿಗೆ
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅನಿಲ್ ಬಾರ್ಕೂರು, ಗಣೇಶ್ ಬಾರ್ಕೂರು, ಕಾರ್ಮಿಕ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ, ಕೆ ಶಂಕರ್, ಚಿಕ್ಕ ಮೊಗವೀರ, ಶಶಿಧರ್ ಗೊಲ್ಲ, ಬಲ್ಕಿಸ್, ಸುಭಾಷ್ ನಾಯಕ್ ಇದ್ದರು.