ʼಕಾಂಗ್ರೆಸ್ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆʼ ಎನ್ನುವ ಮೂಲಕ ಕೋಮು ಸಂಘರ್ಷಕ್ಕೆ ಸಂಚು ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ʼನನ್ನ ಬೂತ್ ನನ್ನ ಜವಾಬ್ದಾರಿʼ ಅಭಿಯಾನದ ಅಂಗವಾಗಿ ಏ.22, ಸೋಮವಾರ ಉಡುಪಿ ಜಿಲ್ಲೆಯ ನಾಡ್ತಿ ಭಾಗದ ಮನೆಗಳಿಗೆ ತೆರಳಿ ಪ್ರಚಾರ ನಡೆಸಿ ಅವರು ಮಾತನಾಡಿದರು.
ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ನರೇಂದ್ರ ಮೋದಿ ಹತಾಶೆಗೆ ತಲುಪಿದ್ದಾರೆ. ದೇಶದಲ್ಲಿ ಕೋಮು ದ್ವೇಷ ಹೆಚ್ಚಿಸಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಪೊಲೀಸ್, ಚುನಾವಣಾ ಆಯೋಗ ಸುಮೊಟೋ ಪ್ರಕರಣ ದಾಖಲಿಸಿ ಪ್ರಧಾನಿ ಮೇಲೆ ಎಫ್ಐಆರ್ ಹಾಕಬೇಕು ಎಂದು ಆಗ್ರಹಿಸಿದರು.
ಬೆಲೆ ಏರಿಕೆ, ನಿರುದ್ಯೋಗ, ಚುನಾವಣಾ ಬಾಂಡ್, ಬಡತನ ಬಿಜೆಪಿಗೆ ವಿಚಾರವಲ್ಲ. ಮುಸ್ಲಿಂ, ಹಿಂದೂಗಳನ್ನು ಪ್ರಚೋಧಿಸಿ ಗಲಭೆ ಸೃಷ್ಟಿಸುವುದನ್ನೇ ಅಧಿಕಾರ ಎಂದುಕೊಂಡಿದ್ದಾರೆ. ದೇಶದಲ್ಲಿ ಹೆಂಡ ಕುಡಿಯದೇ ಸತ್ತವರಿಲ್ಲ. ಹಸಿವಿನಿಂದ ಸತ್ತವರ ಸಂಖ್ಯೆ ಹೆಚ್ಚಿದೆ. ಆರ್ಥಿಕ, ಸಾಮಾಜಿಕ ಸಮಾನತೆ ನೀಡುವ ಕಾಂಗ್ರೆಸ್ ಗ್ಯಾರಂಟಿಯನ್ನು ಹಂಗಿಸುವುದರಲ್ಲಿ ಅರ್ಥವಿಲ್ಲ. ಚುನಾವಣಾ ಬಾಂಡ್ ವಿಚಾರದಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಜೈಲಿಗೆ ಹೋಗಬೇಕು ಎಂದರು.
ಸಿದ್ಧಾಂತದ ಬಗ್ಗೆ ಅರಿವಿಲ್ಲದ ಬಿಜೆಪಿ ಕಾರ್ಯಕರ್ತರು, ಮತದಾರರನ್ನು ನಾನು ವಿರೋಧಿಸುತ್ತಿಲ್ಲ. ಆರ್ ಎಸ್.ಎಸ್ ಸಿದ್ಧಾಂತ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಸಂಸ್ಕೃತ ಆಡಳಿತ ಭಾಷೆ ಮಾಡುವುದಾದರೆ ದೇಶದಲ್ಲಿರುವ 19 ಸಾವಿರ ಭಾಷೆಗಳ ಕಥೆ ಏನು. ಕರ್ನಾಟಕ ಸರ್ಕಾರ ಇಲ್ಲದಿದ್ದರೆ ಕನ್ನಡದ ಅಸ್ಮಿತೆ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಬಿ.ವೈ. ರಾಘವೇಂದ್ರ ಅವರನ್ನು ಸೋಲಿಸಲು ಈಶ್ವರಪ್ಪ, ಆರಗ ಜ್ಞಾನೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಶಾಸಕರು ಈಡಿಗ ಸಮುದಾಯದ ಮುಖಂಡರನ್ನು ತುಳಿದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಮುಖಂಡರ ಪಾರುಪತ್ಯದಲ್ಲಿರುವ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಮಹಿಳೆಯರು, ಪರಿಶಿಷ್ಟರಿಗೆ ಸದಸ್ಯತ್ವ ನೀಡದಿರುವುದು ಆರ್ .ಎಸ್.ಎಸ್ನ ಒಳಸಂಚು ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಮುಖಂಡರಾದ ಡಿ.ಎಸ್. ವಿಶ್ವನಾಥ ಶೆಟ್ಟಿ, ಬಿ.ಆರ್. ರಾಘವೇಂದ್ರ ಶೆಟ್ಟಿ, ಪಡುವಳ್ಳಿ ಹರ್ಷೇಂದ್ರ, ಸುಜಿತ್ ಸಾಲಿಯಾನ, ಗೀತಾ, ಶಬನಮ್, ಸುಶೀಲ ಇದ್ದರು.
