ತಮಿಳುನಾಡಿನಲ್ಲಿ ಸರ್ಕಾರ ಅತಿ ಹೆಚ್ಚು ಮಹಿಳೆಯರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಅಲ್ಲಿಯ ಜನರು ಎಷ್ಟು ಮಂದಿ ಸೋಮಾರಿಗಳಾಗಿದ್ದಾರೆ? ಉಚಿತ ಯೋಜನೆಗಳನ್ನು ನೀಡುವುದರಿಂದ ಜನರು ಸೋಮಾರಿಗಳಾಗುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು. ಅದೇ ರೀತಿ ದೇಶ ದಿವಾಳಿ ಆಗುತ್ತದೆ ಎಂಬುದು ಕೂಡ ಸುಳ್ಳು. ಇಂತಹ ಸುಳ್ಳುಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ, ಈದಿನ.ಕಾಮ್ ಮುಖ್ಯಸ್ಥ ಡಾ. ಎಚ್.ವಿ ವಾಸು ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ‘ಜನರ ಹಕ್ಕುನ್ನು ಖಚಿತಪಡಿಸುವ ಉಚಿತ ಯೋಜನೆಗಳು ಬಿಟ್ಟಿಯಲ್ಲ’ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅದರ ಬೆನ್ನಲ್ಲೇ ವಿರೋಧ ಪಕ್ಷಗಳು ‘ಉಚಿತ ಯೋಜನೆಗಳಿಂದ ದೇಶ ದಿವಾಳಿ ಆಗುತ್ತದೆ’ ಎಂದು ಹೇಳುತ್ತಿವೆ. ಆದರೆ, ರಾಜ್ಯ ಸರ್ಕಾರದ ಉಚಿತ ಯೋಜನೆಗಳಿಂದ ನಿಜವಾಗಿಯೂ ದೇಶ ದಿವಾಳಿ ಆಗುತ್ತಾ ಎಂಬುದರ ಕುರಿತು ಅರ್ಥಶಾಸ್ತ್ರರು ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ನಂತರ ಅದರ ಬಗ್ಗೆ ಮಾತನಾಡಬೇಕು. ಕೇವಲ ವಾಟ್ಸಾಪ್‌ನಲ್ಲಿ ಬಂದ ಸುಳ್ಳು ಸುದ್ದಿಗಳನ್ನು ಓದಿ, ಅದನ್ನೇ ನಂಬಿಕೊಂಡು ಮಾತನಾಡಬಾರದು” ಎಂದರು.
ಸಹಬಾಳ್ವೆ ಉಡುಪಿಯ ಸಂಚಾಲಕ ಪ್ರಶಾಂತ್ ಜತ್ತನ್ನ ಮಾತನಾಡಿ, “ಸರ್ಕಾರದ ಎಲ್ಲ ಯೋಜನೆಗಳು ಬಡವರ ಪರವಾಗಿದ್ದು, ಅದನ್ನು ಅರ್ಹ ಬಡವರಿಗೆ ತಲುಪಬೇಕು. ಆಗ ಮಾತ್ರ ರಾಜ್ಯ ಸರ್ಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ಪ್ರಯೋಜನಕಾರಿ ಆಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈದಿನ.ಕಾಮ್‌ನ ಉಮರ್ ಯು ಹೆಚ್, ಪಂಚಾಯತ್ ರಾಜ್‌ನ ತರಭೇತಿದಾರ ಜಯಂತ್ ರಾವ್, ಸಹಬಾಳ್ವೆ ಉಡುಪಿಯ ವಿರೋನಿಕ ಕರ್ನೇಲಿಯೋ, ಯಾಸೀನ್ ಮಲ್ಪೆ, ನಾಗೇಶ್ ಉದ್ಯಾವರ್, ಫಾದರ್ ವಿಲಿಯಂ ಮಾರ್ಟಿಸ್, ಹುಸೇನ್ ಕೋಡಿಬೆಂಗ್ರೆ, ಅಜೀಝ್ ಉದ್ಯಾವರ್ ಇತರರು ಇದ್ದರು.