ಗಾಂಧೀಜಿ ಅವರ ಚಿಂತನೆಗಳು, ಅವರು ಪ್ರತಿಪಾದಿಸಿದ್ದ ಹಿಂದುತ್ವದಲ್ಲಿನ ಬಹುತ್ವ ಕಲ್ಪನೆಯನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ನಿತ್ಯವೂ ಅವರ ಚಿಂತನೆಯನ್ನು ಅವಲೋಕಿಸಿ, ಪ್ರಸ್ತುತತೆಯನ್ನು ಮನಗಂಡು ರೂಡಿಸಿಕೊಳ್ಳುವ ಅಗತ್ಯತೆ ಮತ್ತು ಅನಿವಾರ್ಯತೆ ಇದೆ ಎಂದು ಪ್ರಾಧ್ಯಾಪಕ ಡಾ. ನಿಕೇತನ್ ಹೇಳಿದರು.
ಉಡುಪಿಯಲ್ಲಿ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಗಾಂಧೀಜಿಯವರ ಹಿಂದು ಧರ್ಮದ ಕಲ್ಪನೆ ಎಲ್ಲ ಧರ್ಮದ ದೇವರನ್ನು ಎಲ್ಲ ಸಂಸ್ಕೃತಿಯನ್ನು ಒಳಗೊಳ್ಳುವ ಬಹುತ್ವದ ಕಲ್ಪನೆಯಾಗಿದೆ. ಗಾಂಧಿ ಸಿದ್ಧಾಂತದ ಒಳಗೆ ಅಂತರಂಗದ ಕ್ರಾಂತಿ ಇತ್ತು. ‘ನಾವು ಸಾಮಾಜಿಕವಾಗಿ ಮಾಡುವ ಕ್ರಾಂತಿ ಮೊದಲು ಅಂತರಂಗದಲ್ಲಿ ಹುಟ್ಟಬೇಕು. ಇಲ್ಲವಾದಲ್ಲಿ ಕ್ರಾಂತಿ ವಿಫಲವಾಗುತ್ತದೆ’ ಎಂದು ಗಾಂಧೀಜಿ ಹೇಳಿದ್ದರು. ಆದರೆ, ಗಾಂಧೀಜಿಯವರನ್ನು ಅಪ್ರಸ್ತುತರಾಗಿಸುವ ಷಡ್ಯಂತ್ರ ನಡೆಯುತ್ತಿದೆ” ಎಂದರು.
“ಗಾಂಧೀಜಿಯವರ ರಾಮ ರಾಜ್ಯದ ಹಿಂದಿರುವ ಕಲ್ಪನೆ ಶಾಂತಿ, ಪ್ರೀತಿ, ಅಹಿಂಸೆಯಾಗಿದೆ. ಅವರು ಪ್ರತಿಪಾದಿಸಿದ ಬಹುತ್ವ ಭಾರತದ ಕಲ್ಪನೆ, ಗ್ರಾಮ ಸ್ವರಾಜ್ಯ, ಅಸ್ಪೃಶ್ಯತೆ ನಿವಾರಣೆ, ಅಹಿಂಸೆ ಇದರಿಂದಲೇ ನಾವು ಇಂದಿನ ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಗಾಂಧೀಜಿಯವರ ಜೀವನದ ಬಗ್ಗೆ ಪ್ರಕಟವಾದ ಸಾಹಿತ್ಯ, ಜಗತ್ತಿನ ಬೇರೆ ಯಾವ ವ್ಯಕ್ತಿಯ ಬಗ್ಗೆಯೂ ಪ್ರಕಟವಾಗಿಲ್ಲ. ಗಾಂಧಿ ಹತ್ಯೆಯಾದ ದಿನ ನೆಹರೂರವರು ‘ಇಂದು ದೇಶದಲ್ಲಿ ಕತ್ತಲು ತುಂಬಿದೆ’ ಎಂದಿದ್ದರು. ಕತ್ತಲೆಯನ್ನ ಓಡಿಸುವುದಕ್ಕೆ ಗಾಂಧಿ ಚಿಂತನೆಗಳು ಮುನ್ನಲೆಗೆ ಬರಬೇಕು” ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, “ಗಾಂಧಿ ಹತ್ಯೆಯ ಹಿಂದಿರುವ ಷಡ್ಯಂತ್ರ, ರಾಜಕೀಯವನ್ನು ಅನಾವರಣಗೊಳಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸಂದೀಪ್, ಸಾರ್ವಜನಿಕ ಹಿಂದೂ ರುದ್ರ ಭೂಮಿ ನಿರ್ವಹಣಾ ಪ್ರತಿಷ್ಠಾನ (ರ)ಅಧ್ಯಕ್ಷ ಗಿರೀಶ್ ಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ತಿಲಕ್ ರಾಜ್ ಸಾಲಿಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ವಂದಿಸಿದರು. ಮಾಜಿ ಅಧ್ಯಕ್ಷ ರಿಯಾಜ್ ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.