ಬಸ್ಸಿನಲ್ಲಿದ್ದ ಪ್ರಯಾಣಿಸುದ್ದಿ ಯುವತಿಯೊಬ್ಬರು ಅಸ್ವಸ್ಥಗೊಂಡಿದ್ದನ್ನು ಕಂಡ ಸರ್ಕಾರಿ ಬಸ್‌ನ ಸಿಬ್ಬಂದಿಗಳು ಬಸ್‌ಅನ್ನು ನೇರವಾಗಿ ಆಸ್ಪತ್ರೆಗೆ ತಿರುಗಿಸಿದ್ದು, ಯವತಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುವಂತೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ. ಸಾರಿಗೆ ಸಿಬ್ಬಂದಿಗಳ ಮಾನವೀಯತೆಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ.
ಶಿವಮೊಗ್ಗದಿಂದ ಉಡುಪಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಸುರಕ್ಷಾ ಎಂಬ ಯುವತಿ ಪ್ರಯಾಣಿಸುತ್ತಿದ್ದರು. ಬಸ್ ಆಗುಂಬೆ ಘಾಟಿಯಲ್ಲಿ ತೆರಳುತ್ತಿದ್ದಾಗ, ಸುರಕ್ಷಾ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ನಿರ್ವಾಹಕ ವಾಸಿಮ್ ದೇಸಾಯಿ ಆಕೆಯ ಸಹಾಯಕ್ಕೆ ಧಾವಿಸಿ, ನೀರು ಕುಡಿಸಿದ್ದರು. ಕೂಡಲೇ ಬಸ್ ಚಾಲಕ ತಾರೇಶ್ ಬಸ್‌ಅನ್ನು ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರದೆಡೆಗೆ ಚಲಾಯಿಸಿದ್ದಾರೆ. ಆದರೆ, ಅಲ್ಲಿ ಯುವತಿ ಚೇತಿಸಿಕೊಳ್ಳದ ಹಿನ್ನೆಲೆ, ಬಸ್‌ನಲ್ಲಿಯೇ ಯುವತಿಯನ್ನು ಹೆಬ್ರಿ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸುರಕ್ಷಾ ಅವರ ಆರೋಗ್ಯ ಚೇತರಿಕೆಗಾಗಿ ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಬಹಳಷ್ಟು ಶ್ರಮವಹಿಸಿದರು. ಅವರಿಗೆ ಮುಸ್ಲಿಂ ಯುವತಿಯೊಬ್ಬರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಮುಸ್ಲಿಂ ಯುವತಿ ಮತ್ತು ಸಿಬ್ಬಂದಿಗಳು ತೋರಿದ ಸಕಾಲಿಕ ಶ್ರಮದಿಂದ ಜೀವ ಉಳಿದಿದ್ದು, ಅವರನ್ನು ಹೆಬ್ರಿಯ ಪೊಲೀಸರು, ಸಾರ್ವಜನಿಕರು ಅಭಿನಂದಿಸಿದ್ದಾರೆ.
“ನನ್ನ ಸಹೋದ್ಯೋಗಿ ವಾಸಿಮ್ ದೇಸಾಯಿ ಯಾವುದನ್ನು ಲೆಕ್ಕಿಸದೆ ಯುವತಿಯನ್ನು ತುರ್ತಾಗಿ ಚಿಕಿತ್ಸೆ ನೀಡಲು ಹೊತ್ತುಕೊಂಡು ಹೋದ ರೀತಿ ನನಗೆ ಕಣ್ಣಲ್ಲಿ ಕಟ್ಟಿದಂತಿದೆ. ಬಸ್‌ನಲ್ಲಿದ್ದ ಸಹ ಪ್ರಯಾಣಿಕ ಮಹಿಳೆಯರು ಸಹಾಯಕ್ಕೆ ಬರಲೇ ಇಲ್ಲ. ಆದರೆ, ಮುಸ್ಲಿಂ ಸಹೋದರಿಯೊಬ್ಬರು ನಮಗೆ ನೆರವು ನೀಡಿದರು. ಆಕೆಯ ನೆರವು ಮತ್ತು ವಾಸಿಮ್ ಅವರ ಶ್ರಮದಿಂದ ಸುರಕ್ಷಾ ಆರೋಗ್ಯಸ್ಥಿತಿ ಚೇತರಿಸಿಕೊಂಡಿದೆ. ಇದು ಸಮಾಜಕ್ಕೆ ಮಾದರಿಯಾಗಬೇಕು. ಹೆಬ್ರಿ ಪೊಲೀಸರು ಕೂಡ ಸೋಮೇಶ್ವರದಿಂದ ಹೆಬ್ರಿಯ ಆಸ್ಪತ್ರೆವರೆಗೆ ‘ಜೀರೋ’ ಟ್ರಾಪಿಕ್ ವ್ಯವಸ್ಥೆ ಮಾಡಿಕೊಟ್ಟರು” ಎಂದು ಚಾಲಕ ತಾರೇಶ್ ಹೇಳಿದ್ದಾರೆ.
“ದೇವರ ರೀತಿಯಲ್ಲಿ ಬಂದು ನನ್ನ ಮಗಳನ್ನು ಕಾಪಾಡಿದ ಸಿಬ್ಬಂದಿಗಳಿಗೆ ನನ್ನ ಮನಪೂರ್ವಕ ಕೃತಜ್ಞತೆ. ಉಸಿರಿರುವವರೆಗೆ ಅವರನ್ನು ನೆನಪಿಸಿಕೊಳ್ಳುತ್ತೇನೆ” ಎಂದು ಸುರಕ್ಷಾ ತಾಯಿ ರೇಖಾ ಹೇಳಿದ್ದಾರೆ