ಸ್ವಂತ ಸೂರಿನ ಕನಸಿನೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಕೂಡಿಟ್ಟ ಹಣವನ್ನೆಲ್ಲ ಸುರಿದು, ಸರ್ಕಾರ ನಿರ್ಮಿಸಿದ ಮನೆಗಳನ್ನು ಕಾದಿರಿಸಿರುವ 240 ಕುಟುಂಬಗಳು ಈಗ ಸಂಕಷ್ಟದ ಸರಮಾಲೆಯನ್ನೇ ಎದುರಿಸುತ್ತಿವೆ. ವಸ್ತುಶ: ಬೀದಿಗೆ ಬಿದ್ದಿವೆ. ಮನೆಗಳು ಹಂಚಿಕೆಯಾಗಿದ್ದರೂ, ಮೂಲ ಸೌಕರ್ಯವಿಲ್ಲದೆ, ಮನೆಗಳು ಹಸ್ತಾಂತರಗೊಳ್ಳದೆ ಬಾಡಿಗೆ ಮನೆಯಲ್ಲಿ ವಾಸುಸುತ್ತಿವೆ. ಅತ್ತ ಬ್ಯಾಂಕ್ ಸಾಲಕ್ಕೆ ಪ್ರತಿ ತಿಂಗಳು ಕಟ್ಟಬೇಕಾದ ಬಡ್ಡಿ, ಇತ್ತ ಇರುವ ಮನೆಗೆ ಬಾಡಿಗೆ ಕಟ್ಟಬೇಕಾದ ಅನಿವಾರ್ಯತೆ ಎದುರಿಸುತ್ತಿವೆ – ಇದು ಉಡುಪಿ ಜಿಲ್ಲೆಯ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್‌ನಲ್ಲಿ ನಿರ್ಮಾಣವಾಗಿರುವ ವಸತಿ ಸಮುಚ್ಛಯದ ಫಲಾನುಭವಿಗಳು ಪಾಡು. ಅವರೆಲ್ಲರೂ ಉಡುಪಿ ನಗರ ಸಭೆಯ ಅಧಿಕಾರಿಗಳು ಮತ್ತು ಮಾಜಿ ಶಾಸಕರ ವಿರುದ್ಧ ಆಕ್ರೋಶಿತರಾಗಿದ್ದಾರೆ.
ಮಾಜಿ ಶಾಸಕ ಕೆ ರಘುಪತಿ ಭಟ್ ಅವರು ಉಡುಪಿ ಶಾಸಕರಾಗಿದ್ದಾಗ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ‘ಸರ್ವರಿಗೂ ಸೂರು ಕಾರ್ಯಕ್ರಮ’ದಡಿ ಉಡುಪಿ ನಗರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ G+3 ಮಾದರಿಯಲ್ಲಿ 460 ಮನೆಗಳನ್ನು ಒಳಗೊಂಡ ವಸತಿ ಸಮುಚ್ಛಯ ನಿರ್ಮಿಸಲಾಗಿತ್ತು. ಇದಕ್ಕೆ ಅರ್ಜಿ ಹಾಕಿ ಆಯ್ಕೆಯಾದ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ 240 ಮನೆಗಳನ್ನು, ದ್ವಿತೀಯ ಹಂತದಲ್ಲಿ 106 ಮನೆಗಳನ್ನು ಚೀಟಿ ಎತ್ತುವ ಪ್ರಕ್ರಿಯೆ ಮೂಲಕ ಅಂದಿನ ಶಾಸಕರು ಫಲಾನುಭವಿಗಳಿಗೆ ಹಂಚಿಕೆ ಮಾಡಿ, ಹಕ್ಕು ಪತ್ರವನ್ನು ನೀಡಿದ್ದರು. ಆದರೆ, ಇದೀಗ ಹಕ್ಕುಪತ್ರ ಕೈ ಸೇರಿ ಐದು ತಿಂಗಳು ಕಳೆದರೂ ಸರ್ಕಾರಿ ವಸತಿ ಸಮುಚ್ಚಯಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಮನೆಗಳು ದೊರೆತಿದ್ದರೂ, ಅಲ್ಲಿ ವಾಸಿಸಲಾಗದೆ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆರ್ಗ ಗ್ರಾಮದ ಸರ್ಕಾರಿ ನಿವೇಶನ ಸ್ಥಳದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸುಮಾರು 240 ಸುಸಜ್ಜಿತ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿ ವರ್ಷ 4 ಕಳೆದಿವೆ. ಆದರೂ ಅವುಗಳು ಪೂರ್ಣಗೊಂಡು ಇನ್ನೂ ಫಲಾನುಭವಿಗಳಿಗೆ ಹಸ್ತಾಂತರವಾಗಿಲ್ಲ. ಫಲಾನುಭವಿಗಳು ತಮ್ಮ ಪಾಲಿನ ಮಾರ್ಜಿನ್ ಹಣ 90,000 ರೂ.ವನ್ನು (ಪರಿಶಿಷ್ಟಜಾತಿ/ ಪಂಗಡದವರಿಗೆ 60,000ರೂ.) ಪಾಲು ಹಣವಾಗಿ ಸಂಬಂಧಪಟ್ಟ ಇಲಾಖೆಗೆ ಕಟ್ಟಿದ್ದಾರೆ. ಬ್ಯಾಂಕ್‌ನ ಸಹಾಯಧನದೊಂದಿಗೆ ಸಾಲ ಸೌಲಭ್ಯ ಪಡೆದು ವಸತಿ ಸಮುಚ್ಚಯ ಕಟ್ಟಡದ ಹಕ್ಕುಪತ್ರ ಪಡೆದಿದ್ದಾರೆ. ಆದರೂ, ವಸತಿ ಸಮುಚ್ಚಯದ ಪಲಾನುಭವಿಗಳು ಆ ಮನೆಗಳಲ್ಲಿ ವಾಸ ಮಾಡಲು ಮೂಲ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ವಸತಿ ಸಮುಚ್ಛಯ ಅವ್ಯವಸ್ಥೆಗಳ ಆಗರವಾಗಿದೆ. ಸರ್ಕಾರಿ ವಸತಿ ಸಮುಚ್ಛಯದಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಪಕ್ಕಾ ಸಂಪರ್ಕ ರಸ್ತೆ, ದಾರಿದೀಪಗಳನ್ನು ಇನ್ನೂ ಅಳವಡಿಸಲಾಗಿಲ್ಲ. ಈ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವಂತೆ ಉಡುಪಿ ನಗರಸಭೆಗೆ ಒತ್ತಾಯಿಸುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ರಾಜ್ಯದ ಬರ ಪರಿಸ್ಥಿತಿಗೆ ಎಲ್ ನಿನೊ ಕಾರಣ? ಏನಿದು ‘ಎಲ್ ನಿನೊ’!
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಂದೇಶ್, “ಈಗಾಗಲೇ ಸಾಲ ಮಾಡಿ ಹಣವನ್ನು ಕಟ್ಟಿದ್ದೇನೆ. ಮನೆಯಲ್ಲಿ ಮೂಲ ಸೌಕರ್ಯ ಇಲ್ಲದೆ ಬಾಡಿಗೆ ಮನೆಯಲ್ಲಿ ಉಳಿಯುವ ಪರಿಸ್ಥಿತಿ ಎದುರಾಗಿದೆ. ಪ್ರತಿದಿನ ಮಾನಸಿಕವಾಗಿ ಕುಗ್ಗುತ್ತಿದ್ದೇನೆ. ಕಳೆದ ಬಾರಿ ನಿವೇಶನ ರಹಿತರ ಸಮಸ್ಯೆಗಳ ಪರಿಹಾರಕ್ಕಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜರುಗಿದ ಜನ ಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿದ್ದರೂ ಈ ತನಕ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ” ಎಂದು ಹೇಳಿದರು.
“ಇನ್ನೂ ಎರಡು ತಿಂಗಳ ಒಳಗಾಗಿ ಮೂಲ ಸೌಕರ್ಯ ಒದಗಿಸಿ ಕೊಡುವ ಬಗ್ಗೆ ಈಗಿನ ಶಾಸಕರು ಯಶ್ಪಾಲ್ ಸುವರ್ಣರವರು ಭರವಸೆ ಕೊಟ್ಟಿದ್ದಾರೆ. ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ನಾವೇ ಒಂದು ಹೋರಾಟ ಸಮಿತಿ ಮಾಡಿದ್ದೇವೆ. ಅದರ ಮೂಲಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೇ ಸ್ವತಃ ಮನೆಗಾಗಿ ನೂರಾರು ಕನಸುಗಳು ಹೊತ್ತ ಬಡ ಮಾಧ್ಯಮ ವರ್ಗದ ಜನರಿಗೆ ಮನೆಯನ್ನು ಕೊಟ್ಟು ಮೂಲ ಸೌಕರ್ಯ ಒದಗಿಸದಿದ್ದರೆ ಆ ಮನೆಯಲ್ಲಿ ಜೀವನ ನಡೆಸುವುದಾದರೂ ಹೇಗೆ ? ಒಟ್ಟಿನಲ್ಲಿ ಹಾಲಿ ಶಾಸಕರು ಮಾತು ಕೊಟ್ಟಂತೆ ಡಿಸೆಂಬರ್ ಅಂತ್ಯದ ವರೆಗೆ ಮೂಲ ಸೌಕರ್ಯ ಒದಗಿ ಬಂದು ವಸತಿ ರಹಿತರಿಗೆ ಶಾಶ್ವತ ಪರಿಹಾರ ಸಿಗಬಹುದೇ ಎಂದು ಕಾದು ನೋಡಬೇಕಿದೆ.