ಉಡುಪಿ ಜಿಲ್ಲೆಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಭಾರೀ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಉಡುಪಿ ಜಿಲ್ಲೆಯ ಮಲ್ಪೆ ನಗರದ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಬ್ಯಾಂಕ್‌ನ ಅಮಾಯಕ ಗ್ರಾಹಕರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಸುಮಾರು 1,413 ಮಂದಿ ಗ್ರಾಹಕರು ತಲಾ ₹20 ಸಾವಿರದಂತೆ ಸಾಲ ಪಡೆದಿದ್ದಾರೆ. ಆದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಲಾ ₹2 ಲಕ್ಷ ಸಾಲ ಪಡೆದಿರುವುದಾಗಿ ದಾಖಲೆಗಳಲ್ಲಿ ನಮೂದಿಸಿದ್ದಾರೆ. ಇದರಿಂದ ಬರೋಬ್ಬರಿ ₹20 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರುವ ಆರೋಪಗಳು ಕೇಳಿಬರುತ್ತಿವೆ” ಎಂದಿದ್ದಾರೆ.
“ನೂರಾರು ಗ್ರಾಹಕರು ತಾವು ಪಡೆದುಕೊಂಡ ಸಾಲದ ಹಣಕ್ಕಿಂತಲೂ ಹೆಚ್ಚಿನ ಹಣವನ್ನು ಈಗಾಗಲೇ ಪಾವತಿ ಮಾಡಿದ್ದಾರೆ. ಆದರೂ ಬ್ಯಾಂಕಿನ ಸಿಬ್ಬಂದಿ ದಬ್ಬಾಳಿಕೆ ದೌರ್ಜನ್ಯ ನಡೆಸಿ ಗ್ರಾಹಕರಿಂದ ಮತ್ತಷ್ಟು ಹಣ ಕೀಳುತ್ತಿರುವುದಾಗಿ ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿದ್ದಲ್ಲದೆ ಗ್ರಾಹಕರ ಮೇಲೆಯೇ ದಬ್ಬಾಳಿಕೆ ನಡೆಸುತ್ತಿರುವುದು ಅಕ್ಷಮ್ಯ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಲಾಟರಿ ಹಾವಳಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ: ಜಿಲ್ಲಾಧಿಕಾರಿ ಕುಮಾರ್
“ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. ಕಳೆದ ವರ್ಷ ಬ್ಯಾಂಕಿನ ಮ್ಯಾನೇಜರ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಹಲವು ಪ್ರಭಾವಿಗಳ ಕೈವಾಡ ಇರುವುದು ಸ್ಪಷ್ಟವಾಗಿದೆ. ಪ್ರಕರಣವೂ ಗಂಭೀರವಾಗಿದೆ. ಹಾಗಾಗಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸರ್ಕಾರ ಕೂಡಲೇ ವಿಶೇಷ ತನಿಖಾ ತಂಡ ರಚಿಸಿ, ಅನ್ಯಾಯಕ್ಕೊಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ” ಎಂದು ಒತ್ತಾಯಿಸಿದರು.