ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಗ್ರಾಹಕರಿಗೆ ಶೀಘ್ರದಲ್ಲಿ ನ್ಯಾಯ ಒದಗಿಸಿ ಋಣಮುಕ್ತರನನಾಗಿಸಬೇಕು ಎಂದು ಮಾಜಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ಗ್ರಾಹಕರಿಗೆ ₹20 ಸಾವಿರದಂತೆ ಸಾಲ ನೀಡಿ, ನಕಲಿ ದಾಖಲೆ ಸೃಷ್ಟಿಸಿ ಅದನ್ನು ತಲಾ ₹2 ಲಕ್ಷದಂತೆ ನಮೂದಿಸಿದ್ದಾರೆ. ದಂಡ ಹಾಗೂ ಬಡ್ಡಿ ಸಹಿತ ಸಾಲ ಮರುಪಾವತಿಸುವಂತೆ ಬ್ಯಾಂಕಿನವರು ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಸಂತ್ರಸ್ತ ಗ್ರಾಹಕರು ನ್ಯಾಯಕ್ಕಾಗಿ ನನಗೆ ದೂರು ನೀಡಿ ಮನವಿ ನೀಡಿದ್ದಾರೆ” ಎಂದು ಹೇಳಿದರು.
“ನಾನು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಸಾಮಾಜಿಕ ಕ್ಷೇತ್ರದಲ್ಲಿ ನಿರಂತರವಾಗಿ ಗುರುತಿಸಿಕೊಂಡಿರುವ ನೆಲೆಯಲ್ಲಿ ಇಂದಿಗೂ ಜನ ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಸದಾ ಇರುವ ನಾನು ನನ್ನ ಬಳಿ ಬರುವ, ನನಗೆ ಈ ಹಿಂದೆ ಮತ ನೀಡಿ ಹರಸಿದ, ನನಗಾಗಿ ಕೆಲಸ ಮಾಡಿದ ನನ್ನ ಕ್ಷೇತ್ರದ ಜನತೆಗೆ ಸ್ಪಂದಿಸುವುದು ನನ್ನ ಆದ್ಯ ಕರ್ತವ್ಯ. ಹಾಗಾಗಿ ನನ್ನ ಜನತೆಯ ಪರ ನಿಲ್ಲುತ್ತೇನೆ. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದ್ದರೆ ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಸಾಲ ಪಡೆದ ಗ್ರಾಹಕರ ವ್ಯತ್ಯಾಸದ ಹಣ ಯಾರಿಗೆ ಹೋಗಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಿಸಿ, ಆ ಹಣವನ್ನು ವಸೂಲಿ ಮಾಡಿ ವಾಪಾಸು ಪಡೆದು ಸಂತ್ರಸ್ತ ಗ್ರಾಹಕರಿಗೆ ನ್ಯಾಯ ಕೊಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದೇನೆ. ಈಗಲೂ ಅದಕ್ಕೆ ಬದ್ಧನಾಗಿದ್ದಾನೆ” ಎಂದು ಹೇಳಿದರು.
“ಉಡುಪಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿರುವ ನಾನು ಇಂದಿಗೂ ಸಾಮಾಜಿಕ ಸೇವೆಯಲ್ಲಿ, ವಿವಿಧ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ನಾನು ಹೋಗುತ್ತಿರುವ ಪ್ರತಿ ಕಾರ್ಯಕ್ರಮದ ಸುದ್ದಿಯನ್ನು ನನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಅದರಂತೆ ಸಂತ್ರಸ್ತರು ನೀಡಿದ ಮನವಿಯ ಸುದ್ದಿಯನ್ನು ನನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಆದರೆ ಯಾವುದೇ ಪತ್ರಿಕಾ ಹೇಳಿಕೆ ನೀಡಿಲ್ಲ” ಎಂದಿದ್ದಾರೆ.

“ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ತಮ್ಮ ಬ್ಯಾಂಕ್‌ನಲ್ಲಿ 20 ಸಾವಿರ ಸಾಲ ನೀಡಿ, ನಕಲಿ ದಾಖಲೆ ಸೃಷ್ಟಿಸಿ ₹2 ಲಕ್ಷವೆಂದು ನಮೂದಿಸಿ ಕೋಟಿಗಟ್ಟಲೆ ಅಕ್ರಮ ನಡೆಸಿದ್ದು, ಅದನ್ನು ಗ್ರಾಹಕರ ಮೇಲೆ ಹೇರಿದ್ದಾರೆ. ಅಕ್ರಮವಾದ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಿ ಸಂತ್ರಸ್ತ ಗ್ರಾಹಕರನ್ನು ತಾವು ಸಾಲ ಮುಕ್ತರನ್ನಾಗಿಸಬೇಕು” ಎಂದು ಆಗ್ರಹಿಸಿದರು.
ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಪಡೆದ ₹20 ಸಾವಿರ ಸಾಲ ನೀಡಿದ್ದು, ಪ್ರತಿ ತಿಂಗಳು ₹900ರಂತೆ ಪಾವತಿಸಬೇಕೆಂದು ತಿಳಿಸಿದ್ದಾರೆ. ಅದರಂತೆ ಸಾಲ ಪಡೆದ ಗ್ರಾಹಕರು ಪ್ರತಿ ತಿಂಗಳು ₹900ರಂತೆ ಪಾವತಿಸುತ್ತಿದ್ದರು. ಕೆಲವು ಮಂದಿ ಗ್ರಾಹಕರಿಗೆ ಪೋಸ್ಟ್ ಮೂಲಕ ಬ್ಯಾಂಕ್‌ನ ಶೇರ್ ಸರ್ಟಿಫಿಕೇಟ್ ಬಂದಿದ್ದು, ಅದನ್ನು ನಗದೀಕರಿಸಲು ಬ್ಯಾಂಕಿಗೆ ತೆರಳಿದಾಗ ಅವರ ಹೆಸರಿನಲ್ಲಿ ₹2 ಲಕ್ಷ ಸಾಲ ಇರುವುದಾಗಿ ತಿಳಿದುಬಂದಿದೆ. ಇನ್ನು ಕೆಲವು ಗ್ರಾಹಕರ ಮನೆ ಬಾಗಿಲಿಗೆ ಸಾಲ ವಸೂಲಿಗಾರರು ತೆರಳಿ ಸಾಲದ ಮೊತ್ತ ಪಾವತಿಸಲು ಕಿರುಕುಳ ನೀಡಲಾರಂಭಿಸಿದ್ದಾರೆ. ಈ ಕುರಿತಾಗಿ ಗ್ರಾಹಕರು ಬ್ಯಾಂಕ್ ಮ್ಯಾನೇಜರ್ ಗಮನಕ್ಕೆ ತಂದಾಗ ನೀವು ಪಡೆದ ಸಾಲ ಬಡ್ಡಿ ಸೇರಿ ₹3,20,000 ಆಗಿದೆ ಎಲ್ಲವನ್ನೂ ಪಾವತಿಸುವಂತೆ ತಾಕೀತು ಮಾಡಿದ್ದಾರೆ” ಎಂದು ಹೇಳಿದರು.
“ಸಂತ್ರಸ್ತ ಗ್ರಾಹಕರು ತಾವು ಪಡೆಯದ ಸಾಲವನ್ನು ಪಾವತಿಸಲು ನಿರಾಕರಿಸಿದಾಗ ಬ್ಯಾಂಕ್ ವ್ಯವಸ್ಥಾಪಕರು ಸಾಲ ಪಡೆದ ಸಂತ್ರಸ್ತ ಗ್ರಾಹಕರು, ಬ್ಯಾಂಕ್ ಸಾಲ ವಸೂಲಿಗಾರರು, ವ್ಯವಸ್ಥಾಪಕರು ಹಾಗೂ ಬ್ಯಾಂಕ್ ಅಧ್ಯಕ್ಷರ ನೇತೃತ್ವದಲ್ಲಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸಂಧಾನ ಸಭೆ ಆಯೋಜಿಸಿದರು. ಈ ಸಂಧಾನ ಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷರು ದಬ್ಬಾಳಿಕೆ ನಡೆಸಿ ಹಲ್ಲೆಗೆ ಮುಂದಾಗಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ. ಉಡುಪಿ ನಗರ ಸಭೆಯ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರ ತಾಯಿಯೂ ಈ ಸಾಲದ ಸಂತ್ರಸ್ತೆಯಾಗಿದ್ದಾರೆ. ಆ ಸಂಧಾನ ಸಭೆಯಲ್ಲಿ ಅವರೂ ಇದ್ದರು ಎಂಬದನ್ನು ತಿಳಿಸಿದ್ದಾರೆ” ಎಂದರು.
“ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ, ವಿಚಾರಣಾಧಿಕಾರಿ ಕೆ ಎಸ್ ಜಗದೀಶ್(ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರು, ಉಡುಪಿ) ಅವರು ನಡೆಸಿದ ವಿಚಾರಣೆಯಲ್ಲಿ ಶಾಖಾ ವ್ಯವಸ್ಥಾಪಕ ಸುಬ್ಬಣ್ಣ ಅವರು ಒಟ್ಟು 1,413 ಮಂದಿಗೆ ತಲಾ ₹2 ಲಕ್ಷದಂತೆ ಒಟ್ಟು ₹28.26 ಕೋಟಿ ನೀಡಿ ಅವ್ಯವಹಾರ ನಡೆಸಿರುವ ಬಗ್ಗೆ, ತಮ್ಮ ಬ್ಯಾಂಕ್‌ಗೆ 2023ರ ಅಕ್ಟೋಬರ್ 10ರಂದು ನೀಡಿರುವ ನೋಟಿಸ್ ಪ್ರತಿಯನ್ನು ನನಗೆ ನೀಡಿದ್ದಾರೆ. ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಆದ ವ್ಯತ್ಯಾಸವನ್ನು ಸರಿಪಡಿಸಿ ಸಾಲ ಪಡೆಯದ ಗ್ರಾಹಕರನ್ನು ಋಣ ಮುಕ್ತಗೊಳಿಸುವುದು ಪ್ರತಿಷ್ಠಿತ ಬ್ಯಾಂಕ್‌ನವರಾದ ತಮ್ಮ ಜವಾಬ್ದಾರಿಯಾಗಿದೆ. ಈ ಬಗ್ಗೆ ತಾವು ಏನು ಕ್ರಮ ಕೈಗೊಂಡಿದ್ದೀರಿ” ಎಂದು ಶಾಖಾಧಿಕಾರಿಯನ್ನು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಬೈಲಕೆರೆಯಲ್ಲಿ ಅಪರಿಚಿತ ಶವ ಪತ್ತೆ; ಸಂಬಂಧಿಕರು ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ಸೂಚನೆ
“ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಬೇನಾಮಿ ಸಾಲದ ಅಕ್ರಮ ಎಸಗಿರುವ ಬಗ್ಗೆ, ಸಂತ್ರಸ್ಥರು ನೀಡಿರುವ ದೂರಿನಂತೆ ಸರ್ಕಾರ ಮಧ್ಯ ಪ್ರವೇಶಿಸಿ ಸಹಕಾರ ಇಲಾಖೆಯಿಂದ ಕಲಂ 64ರ ಪ್ರಕಾರ ತನಿಖೆ ನಡೆಸಿ ಈ ಪ್ರಕರಣವನ್ನು ಗೃಹ ಇಲಾಖೆಯ ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು. ಸಾಲಾಗಾರರ ಹಸ್ತಾಕ್ಷರದ ಪ್ರತಿಯನ್ನು ಪೊಲೀಸ್ ಇಲಾಖೆಯ ಮೂಲಕ ಫಾರೆನ್ಸಿಕ್ ಸಂಸ್ಥೆಗೆ ಕಳುಹಿಸಿ ಪರೀಕ್ಷಿಸಿ ಹಸ್ತಾಕ್ಷರದ ಸತ್ಯಾಸತ್ಯತೆಯನ್ನು ಹೊರಗೆಳೆಯಬೇಕು. ಆಕ್ರಮ ಎಸಗಿದ ತಪ್ಪಿತಸ್ಥರು ಯಾರೆಂಬುದು ಜನತೆಗೆ ತಿಳಿಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಂತ್ರಸ್ತರು ಸಾಲದಿಂದ ಋಣ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಬೇಕು. ಹಾಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.