ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ಸಂಸದ ಸಸಿಕಾಂತ್ ಸೆಂಥಿಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಯದರ್ಶಿ ಇದ್ರೀಸ್ ಹೂಡೆ ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ವಿವಿಧ ಸಮುದಾಯಗಳ ಮಧ್ಯೆ ಮಧುರ ಸಂಬಂಧವನ್ನು ಬೆಸೆಯುವ , ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಇಂತಹ ಸಕಾರಾತ್ಮಕ ಕೆಲಸಗಳನ್ನು ಪ್ರೋತ್ಸಾಹಿಸುವ ಕೆಲಸಗಳೊಂದಿಗೆ ಸಾಮುದಾಯಿಕ ಸೇವಾ ಚಟುವಟಿಕೆಗಳಲ್ಲಿ ನಿರತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ, ಮಾನವೀಯ ಮೌಲ್ಯಗಳಿಗಾಗಿ ಶ್ರಮಿಸಿದವರಿಗಾಗಿ ಕೊಡಲಾಗುವ ‘ಮಾನವ ರತ್ನ’ ಮತ್ತು ಸಮಾಜಸೇವೆ ತಮ್ಮ ತೊಡಗಿಸಿ ತನ್ನ ಸಂಪತ್ತು ವ್ಯಯಿಸುವುದು ಸೇರಿದಂತೆ ಇತರ ಸೇವಾ ಕ್ಷೇತ್ರಗಳಲ್ಲಿ ದುಡಿದು ಸಮಾಜದ ಕಲ್ಯಾಣಕ್ಕಾಗಿ ಪ್ರಯತ್ನಿಸಿದವರಿಗೆ ‘ಸೇವಾ ರತ್ನ’ ಪ್ರಶಸ್ತಿಗಳನ್ನು ನೀಡುತ್ತಿದೆ. ಈ ಬಾರಿಯೂ ನವೆಂಬರ್ 10ರಂದು ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುವುದು ಎಂದು ಹೇಳಿದರು.
ಈ ಬಾರಿಯ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ ಸೆಂಥಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ‘ಸೇವಾ ರತ್ನ’ ಪ್ರಶಸ್ತಿಗೆ ಮೂಲತಃ ಕಾರ್ಕಳದವರಾಗಿದ್ದು, ದುಬೈಯಲ್ಲಿ ಉದ್ಯಮಿಯಾಗಿರುವ ಕೆ.ಎಸ್.ನಿಸಾರ್ ಅಹ್ಮದ್ ಆಯ್ಕೆಯಾಗಿದ್ದಾರೆ. ಈ ವರ್ಷದಿಂದ ಈ ಪ್ರಶಸ್ತಿಗಳ ಜೊತೆಗೆ ಸಾಮಾಜಿಕ ಸೌಹಾರ್ದತೆಗಾಗಿ ಶ್ರಮಿಸುವವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿಯನ್ನೂ ಕೊಡಲಾಗುತ್ತಿದ್ದು, ಈ ಚೊಚ್ಚಲ ಪ್ರಶಸ್ತಿಗೆ ಉಡುಪಿಯ ಕ್ರೈಸ್ತ ಧರ್ಮ ಗುರುಗಳೂ, ಸಾಮಾಜಿಕ ಹೋರಾಟಗಾರರೂ ಆಗಿರುವ ಫಾ. ವಿಲಿಯಮ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಮುಂದಿನ ನವೆಂಬರ್ 10ನೇ ತಾರೀಕಿನಂದು ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆಯಲಿರುವ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು ಎಂದು ಹೇಳಿದರು.
ಇದೇ ಸಮಾವೇಶದಲ್ಲಿ ಸಮಾಜಕ್ಕೆ ಅಪೂರ್ವ ಸೇವೆ ಸಲ್ಲಿಸಿರುವ 6 ಮಂದಿ ಹಿರಿಯ ಸಾಧಕರನ್ನು ಸನ್ಮಾನಿಸಲಾಗುವುದು. ಶಿಕ್ಷಣ, ಸಾಹಿತ್ಯ. ಜಾನಪದ, ಸಂಘಟನೆ, ಮತ್ತು ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ, ಹಲವು ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾಗಿರುವ ಸಾಹಿತಿ ಮತ್ತು ವಾಗ್ಮಿ ಡಾ. ಗಣನಾಥ ಎಕ್ಕಾರ್, ಜೀವನದುದ್ದಕ್ಕೂ ಜಾತ್ಯತೀತ ಮೌಲ್ಯಗಳಿಗೆ ಬದ್ಧರಾಗಿದ್ದು, ಸ್ವಚ್ಛ ರಾಜಕೀಯ ಜೀವನವನ್ನು ನಡೆಸಿರುವ ಜಿಲ್ಲೆಯ ಈರ್ವರು ಹೆಮ್ಮೆಯ ಮಹಿಳೆಯರಾದ ಉಡುಪಿ ಜಿಲ್ಲಾ ಪಂಚಾಯತಿನ ಮಾಜಿ ಅಧ್ಯಕ್ಷೆ ಸರಸು ಡಿ. ಬಂಗೇರ ಮತ್ತು ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸರಳಾ ಕಾಂಚನ್, ಸಾಮಾಜಿಕ ನ್ಯಾಯದ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುವ ದಲಿತ ನಾಯಕ ಮತ್ತು ಸಂಘಟಕ ಅಣ್ಣಪ್ಪ ನಕ್ರೆ ಹಾಗೂ ಅನಾಥರು, ಅಸಹಾಯಕರು ಹಾಗೂ ನಿರಾಶ್ರಿತರ ಸೇವೆಗೆ ಸದಾ ಸಿದ್ಧರಾಗಿರುವ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ಹಸೈನಾರ್ ಕೊಡಿ, ಕುಂದಾಪುರ ಈ ಸಂದರ್ಭದಲ್ಲಿ ಸನ್ಮಾನಿಸಲ್ಪಡಲಿದ್ದಾರೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಾನಪದ ವಿದ್ವಾಂಸ, ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಪುರುಷೋತ್ತಮ ಬಿಳಿಮಲೆ ಮುಖ್ಯ ಭಾಷಣ ಮಾಡಲಿದ್ದಾರೆ. ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ, ಉದ್ಯಮಿ ಅಬ್ದುಲ್ಲಾ ಕುಂಞಿ ಸಮಾವೇಶವನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಯಾಸಿನ್ ಮಲ್ಪೆ ಪ್ರಸ್ತಾವನೆ ಹಾಗೂ ಅಭಿನಂದನಾ ಭಾಷಣ ನಿರ್ವಹಿಸಲಿದ್ದಾರೆ. ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಬಿ.ಎಸ್.ಶರ್ಫುದ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಮಾಜಿ ಸಚಿವರು ಮತ್ತು ಉಡುಪಿಯ ಮಾಜಿ ಸಂಸದರುಗಳಾದ ಶ್ರೀ. ವಿನಯ ಕುಮಾರ್ ಸೊರಕೆ ಮತ್ತು ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಅಬ್ದುಲ್ಲಾ ಪರ್ಕಳ, ಕರ್ನಾಟಕ ಅಲೈಡ್ ಹೆಲ್ತ್ ಕೌನ್ಸಿಲ್ ಅಧ್ಯಕ್ಷರಾದ ಯು.ಟಿ.ಇಫ್ತಿಖಾರ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ಆಫ್ರೋಜ್ ಅಸ್ಸಾದಿ ದುಬೈ, ಸಹಬಾಳ್ವೆಯ ಅಧ್ಯಕ್ಷ ಕೆ. ಫಣಿರಾಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ತರ್, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಗ್ರೇಸಿ ಕೊಯಲೋ, ಕುಂದಾಪುರದ ಕೊಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಫಿರ್ದೌಸ್ ಉಪಸ್ಥಿತರಿರಲಿದ್ದಾರೆ. ಎಸ್.ಕೆ ಇಕ್ಬಾಲ್ ಕಡಪಾಡಿ ಅವರನ್ನು ಸಮಾವೇಶದ ಸಂಚಾಲಕರಾಗಿದ್ದು, ಇಕ್ಬಾಲ್ ಮನ್ನಾ ನಾಯರ್‌ಕೆರೆ ಸಹ ಸಂಚಾಲಕರು ಮತ್ತು ಇಸ್ಮಾಯಿಲ್ ಹುಸೈನ್ ಮೇಲ್ವಿಚಾರಕರಾಗಿ ಜವಾಬ್ದಾರಿ ವಹಿಸಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಮೆಣಸಿನಕಾಯಿ ಬೆಳೆಗಾರರಿಗೆ ಹಣ ನೀಡದೆ ಮೋಸ : ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸಲಾವುದ್ದೀನ್ ಅಬ್ದುಲ್ಲಾ, ಜಪ್ರುಲ್ಲಾ ನೇಜಾರ್, ಇಸ್ಲಾಮಿಲ್ ಹುಸೈನ್ ಕಟಪಾಡಿ, ಸಯ್ಯದ್ ಫರೀದ್ ಉಪಸ್ಥಿತರಿದ್ದರು.
