ನೂತನ ಶಾಸಕರಿಗೆ ತರಬೇತಿ ಕೊಟ್ಟಂತೆ ಕೆಲವು ಪತ್ರಕರ್ತರಿಗೂ ತರಬೇತಿ ಕೊಡುವ ಅವಶ್ಯಕತೆ ಇದೆ ಎಂದು ವಿಧಾಸಭಾ ಸ್ಪೀಕರ್ ಯು ಟಿ ಖಾದರ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಜತ ಮಹೋತ್ಸವ ಸಮಿತಿ ಹಾಗೂ ಕಸ್ತೂರ ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ. ಟಿಎಂಎ ಪೈ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ರಾಜ್ಯದ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧವಿದೆ. ಪತ್ರಕರ್ತರಿಲ್ಲದೇ ರಾಜಕಾರಣಿಗಳಿಲ್ಲ. ಹಾಗೆಯೇ ರಾಜಕಾರಣಿಗಳಿಲ್ಲದೇ ಪತ್ರಕರ್ತರಿಲ್ಲ. ರಾಜಕೀಯದಲ್ಲಿ ಗೊಂದಲಗಳುಂಟಾದಾಗ ಪತ್ರಕರ್ತರ ಸಲಹೆ, ಸೂಚನೆಗಳಿಂದ ಗೊಂದಲ ಬಗೆಹರಿದ ಅನೇಕ ಉದಾಹರಣೆಗಳಿವೆ.
“ನಮ್ಮ ಸಂಪ್ರದಾಯ, ಆಚಾರ-ವಿಚಾರಗಳು ಪಾರಂಪರಿಕವಾಗಿ ಬೆಳೆದು ನಿಲ್ಲಬೇಕಾದರೆ ಅದಕ್ಕೆ ಪತ್ರಕರ್ತರ ಕೊಡುಗೆ ಅಪಾರವಾದುದು. ಯುವ ಪೀಳಿಗೆಗೆ ನಮ್ಮ ಸಂಪ್ರದಾಯಗಳನ್ನು ವರ್ಗಾಯಿಸುವ ದೊಡ್ಡ ಶಕ್ತಿಯಾಗಿ ಮಾಧ್ಯಮದ ಪಾಲು ಬಹಳಷ್ಟಿದೆ” ಎಂದರು.
‘ಪತ್ರಕರ್ತರ ಭವಿಷ್ಯದ ಬಗ್ಗೆಯೂ ಚಿಂತಿಸಬೇಕಿದೆ‘
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಸಾಮರಸ್ಯ, ಸತ್ಯದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪತ್ರಕರ್ತರು ತಮ್ಮ ಕುಟುಂಬವನ್ನು ತ್ಯಜಿಸಿ ರಾತ್ರಿ-ಹಗಲೆನ್ನದೇ ದುಡಿಯುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಸದಾ ಚಿಂತಿಸುವ ಪತ್ರಕರ್ತರು ಮತ್ತು ಅವರ ಮಕ್ಕಳ ಭವಿಷ್ಯದ ಬಗ್ಗೆಯೂ ಚಿಂತಿಸಬೇಕಿದೆ ಎಂದು ಹೇಳಿದರು.
“ಸಮಾಜದ ಅನೇಕ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಬೆಳಕು ಚೆಲ್ಲುವ ಪತ್ರಕರ್ತರಿಗೂ ಸಾಕಷ್ಟು ಸಮಸ್ಯೆಗಳಿವೆ. ಈಗಲೂ ನಿವೇಶನಕ್ಕಾಗಿ ಪತ್ರಕರ್ತರು ಹಾತೊರೆಯುತಿದ್ದಾರೆ. ಪತ್ರಕರ್ತರ ಏಳಿಗೆಗಾಗಿ ಸರ್ಕಾರದ ಮಟ್ಟದಲ್ಲಿ ಮುಂದೆ ನಿಂತು ಮಾಡಿಸಿಕೊಡುತ್ತೇನೆ. ರಾತ್ರಿ-ಹಗಲು, ಚಳಿ-ಮಳೆ ಎನ್ನದೇ ಸುದ್ದಿ ಮಾಡುವ ಪತ್ರಕರ್ತರ ಶ್ರಮವನ್ನು ಕಣ್ಣಾರೆ ಕಂಡಿದ್ದೇನೆ. ಖಂಡಿತವಾಗಿಯೂ ನಿಮ್ಮೆಲ್ಲರ ಶ್ರಮಕ್ಕೆ ಫಲ ಸಿಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಕಾರ್ಯಕರ್ತೆಯಾಗಿ ಆರಂಭಗೊಂಡ ನನ್ನ ರಾಜಕೀಯ ಜೀವನ ಇಂದು ಪ್ರತಿಭಾವಂತ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಇದು ನನ್ನ ಶ್ರಮಕ್ಕೆ ಸಿಕ್ಕ ಪ್ರತಿಫಲ. ತಂದೆ-ತಾಯಿ ಕಷ್ಟಪಟ್ಟು ತಮ್ಮ ಭವಿಷ್ಯದ ಬಗ್ಗೆ ಕನಸು ಕಂಡಿದ್ದಾರೆ. ಅವರ ಕನಸನ್ನು ನನಸು ಮಾಡುವ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದೆ. ಅವರ ಕನಸನ್ನು ನನಸುಗೊಳಿಸಲು ನೀವೆಲ್ಲರೂ ಸನ್ನದ್ಧರಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ
ಈ ಸಂದರ್ಭದಲ್ಲಿ ಸಂಘದ ಸದಸ್ಯರಾಗಿರುವ ಪತ್ರಕರ್ತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಮಾಹೆ ಪ್ರೊ. ಚಾನ್ಸಲರ್ ಡಾ. ಎಚ್ ಎಸ್ ಬಲ್ಲಾಳ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಣಿಪಾಲ ಕಸ್ತೂರ ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಜಿಲ್ಲಾಧಿಕಾರಿ ಎಂ ಕೂರ್ಮರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚಿಂದ್ರ ಹಾಕೆ ಇದ್ದರು.