ಉಡುಪಿ ನಗರಸಭೆ ಮತ್ತು ಉಡುಪಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿದ್ದ ಕೆರೆಯ ಏರಿ ಉದ್ಘಾಟನೆಗೂ ಮುನ್ನವೇ ಕುಸಿದಿದ್ದು, ಆಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಉಡುಪಿ ಬಳಿಯ ಪರ್ಕಳದ ದುರ್ಗಾ ನಗರದಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಕಾಮಗಾರಿ ನಡೆಯುತ್ತಿದ್ದಾಗ, ಕರೆಯ ಮಣ್ಣಿನಲ್ಲಿ ತ್ರಿಶೂಲ ಇರುವ ಕಲ್ಲು ಹಾಗೂ ಅಭಿಷೇಕ ನಡೆದ ತೀರ್ಥ ಹರಿದು ಹೋಗುವ ಕಲ್ಲಿನ ಕೊಂಡಿಸಿಕ್ಕಿದ್ದವು. ನಾಥ ಪಂಥಕ್ಕೆ ಸೇರಿದ ವಸ್ತುಗಳಾಗಿದ್ದು, ಅವು12ನೇ ಶತಮಾನದಲ್ಲಿ ಕೆತ್ತಲಾಗಿದ್ದವು ಎಂದು ಹೇಳಲಾಗಿತ್ತು. ಆಗಲೂ ಕೆರೆ ಸುದ್ದಿಯಾಗಿತ್ತು.
ಇದೀಗ, ಮತ್ತೆ ಕೆರೆ ಸುದ್ದಿಯಲ್ಲಿದ್ದು, ಕಾಮಗಾರಿ ಮುಗಿದು, ಉದ್ಘಾಟನೆ ಆಗುವ ಮುನ್ನವೇ ಕೆರೆಯ ಏರಿ ಕುಸಿದು ಬಿದ್ದಿದೆ. ಸರಿಯಾದ ರೀತಿಯಲ್ಲಿ ಕಾಮಗಾರಿ ಗುಣಮಟ್ಟ ಪರೀಕ್ಷಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೆರೆ ಏರಿ ಕುಸಿದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್, “ನಗರಸಭೆ ಮತ್ತು ಉಡುಪಿ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಆದರೆ, ಉದ್ಘಾಟನೆಗೂ ಮುನ್ನವೇ ಕೆರೆ ಏರಿ ಕುಸಿದಿದೆ. ವಾರದ ಹಿಂದೆ ಪರ್ಕಳ ಮಾಲಿಂಗೇಶ್ವರದ ದೇವಸ್ಥಾನದ ಎದುರುಗಡೆ ಎರಡು ಕೋಟಿ ಇರುವ ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ನಿರ್ಮಾಣವಾದ ಕೆರೆ ನಾಲ್ಕನೇ ಬಾರಿ ಕುಸಿತ ಕಂಡಿದೆ. ಕಾಮಗಾರಿಗಳ ಗುಣಮಟ್ಟವನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ” ಎಂದಿದ್ದಾರೆ.