ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ರೈತರ ಹತ್ಯಾಕಾಂಡಕ್ಕೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಕಾರಣರಾಗಿದ್ದು, ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಬಂಧಿಸಬೇಕೆಂದು ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದರು.
ಉಡುಪಿಯ ಅಜ್ಜರಕಾಡುವಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, “ರೈತರ ಐತಿಹಾಸಿಕ ದೆಹಲಿ ಹೋರಾಟದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಲಖಿಂಪುರ ಕೇರಿಯಲ್ಲಿ 2021ರ ಅಕ್ಟೋಬರ್ 03ರಂದು ರೈತರು ನಡೆಸಿದ ಹೋರಾಟವನ್ನು ಹತ್ತಿಕ್ಕಲು ಗೃಹ ವ್ಯವಹಾರಗಳ ಕೇಂದ್ರ ಸಚಿವ ಅಜಯ್ ಮಿಶ್ರಾ, ಹೋರಾಟಗಾರರಿಗೆ ಬೆದರಿಕೆ ಒಡ್ಡಿದ ಬೆನ್ನಲ್ಲೇ ಸಚಿವರ ಮಗ ಆಶಿಷ್ ಮಿಶ್ರಾ ರೈತ ಹೋರಾಟಗಾರರ ಮೇಲೆ ಕಾರು ಹರಿಸಿ ನಾಲ್ಕು ಮಂದಿ ರೈತರು ಹಾಗೂ ಒಬ್ಬ ಪತ್ರಿಕಾ ವರದಿಗಾರನ ಕೊಲೆಗೆ ಕಾರಣವಾದ ದಿನವನ್ನು ಸಿಐಟಿಯು ಹಾಗೂ ರೈತ ಸಂಘಟನೆಗಳು ದೇಶದಾದ್ಯಂತ ಕಪ್ಪು ದಿನ ಆಚರಿಸಬೇಕು” ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕವಾಗಿ ಮಾತನಾಡಿ, “ಅಮಾನವೀಯ ಕೃತ್ಯ ಎಸಗಿದವರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರ ಅಗತ್ಯತೆಗಳ ಈಡೇರಿಕೆಗೆ ಆಗ್ರಹ
ರೈತ ಮುಖಂಡ ಚಂದ್ರಶೇಖರ, ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ ಶಂಕರ್, ಶಶಿಧರ ಗೊಲ್ಲ, ಎಚ್ ನರಸಿಂಹ, ಮಹಾಬಲ ವಡೇರಹೋಬಳಿ, ಸಂತೋಷ ಹೆಮ್ಮಾಡಿ, ರಾಜು ದೇವಾಡಿಗ, ರವಿ ವಿ ಎಂ, ಸದಾಶಿವ ಪೂಜಾರಿ, ಸುಭಾಶ್ ನಾಯಕ್ ಸೇರಿದಂತೆ ಇತರರು ಇದ್ದರು.