ಉಡುಪಿಯ ವಕೀಲರ ಸಂಘವು ಸಂಘದ ಉದ್ಧಾರಕ್ಕಾಗಿ ಹಾಗೂ ದುಷ್ಟ ಶಕ್ತಿಗಳ ನಿವಾರಣೆಗೆ ‘ಗಣಹೋಮ’ದ ಮೊರೆ ಹೋಗಿದ್ದಾರೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ರೆನೋಲ್ಡ್ ಪ್ರವೀಣ್ ಕುಮಾರ್ ಅವರ ಹೆಸರಿನಲ್ಲಿ ಪೋಸ್ಟ್ ಒಂದನ್ನು ಹಂಚಲಾಗುತ್ತಿದ್ದು, ಫೆ.10ರ ಸೋಮವಾರ ಬೆಳಗ್ಗೆ 8ಕ್ಕೆ ಸ್ಥಳಾಂತರಗೊಂಡಿರುವ ವಕೀಲರ ಸಂಘದಲ್ಲಿ ಗಣಹೋಮ ಹಮ್ಮಿಕೊಂಡಿರುವುದಾಗಿ ತಿಳಿಸಲಾಗಿದೆ.
ವೈರಲ್ ಆಗಿರುವ ಪೋಸ್ಟರ್‌ನಲ್ಲಿ, “ಉಡುಪಿ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ವಕೀಲರ ಸಂಘದಲ್ಲಿ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಹಾಗೂ ತಮ್ಮ ಸ್ವಾರ್ಥ ಸಾಧನೆಗಾಗಿ ವಿನಾಕಾರಣ ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡುತ್ತಾ ಸಂಘಕ್ಕೆ ಅಹಿತ ಬಯಸುವ ಸಮಸ್ತ ದುಷ್ಟ ಶಕ್ತಿಗಳ ನಿವಾರಣೆಗಾಗಿ ದಿನಾಂಕ 10.2.2025ನೇ ಸೋಮವಾರ ಬೆಳಗ್ಗೆ 8ಕ್ಕೆ ಸರಿಯಾಗಿ ಸ್ಥಳಾಂತರಿತ ವಕೀಲರ ಸಂಘದಲ್ಲಿ “ಗಣಹೋಮ” ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸದಸ್ಯರು ಪಾಲ್ಗೊಂಡು ವಿಘ್ನೇಶ್ವರನ ಕೃಪೆಗೆ ಪಾತ್ರರಾಗಬೇಕಾಗಿ ಕೋರುತ್ತಿದ್ದೇವೆ” ಎಂದು ಉಲ್ಲೇಖಿಸಲಾಗಿದೆ.

ಕಾನೂನಿನ ಶಿಕ್ಷಣ ಪಡೆದು, ಮೌಢ್ಯತೆ ದೂರ ಮಾಡಬೇಕಾದ ವಕೀಲರೇ, ‘ತಮ್ಮ ಸಂಘದ ವಿರುದ್ಧದ ದುಷ್ಟ ಶಕ್ತಿಯನ್ನು ನಿವಾರಿಸುವ ಉದ್ದೇಶಕ್ಕಾಗಿ’ ಎಂದು ಉಲ್ಲೇಖಿಸಿ ಗಣಹೋಮ ಹಮ್ಮಿಕೊಂಡಿರುವುದು ಈಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇದನ್ನು ಪ್ರಶ್ನಿಸುತ್ತಿದ್ದಾರೆ.
ವಕೀಲರ ಸಂಘಕ್ಕೆ ಅಹಿತ ಬಯಸುತ್ತಿರುವ ದುಷ್ಟ ಶಕ್ತಿಗಳು ಯಾರು? ಆ ದುಷ್ಟ ಶಕ್ತಿಗಳು ಸಂಘಕ್ಕೆ ಏನು ಮಾಡಿದೆ ಎಂಬುದನ್ನು ಉಡುಪಿ ವಕೀಲರ ಸಂಘವೇ ಉತ್ತರಿಸಬೇಕಿದೆ.
