ವೇದ ಕೇಳಿದರೆ ಕಿವಿಗೆ ಕಾಯಿಸಿದ ಸೀಸ ಹಾಕಿ, ವಿದ್ಯೆ ಕಲಿತರೆ ನಾಲಿಗೆ ಸೀಳುವುದಾಗಿ ಮಂತ್ರ ಹೇಳಿದರೆ ದೇಹ ಸೀಳುವುದಾಗಿ ಹೇಳುವ ಮನುಸ್ಮೃತಿ ಬೇಕೋ ಇಲ್ಲಾ, ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಸಂವಿಧಾನ ಬೇಕೋ ನೀವೇ ನಿರ್ಧರಿಸಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದರು.
ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರ 133ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಭೀಮಯಾನ ಮಹಾ ರ್‍ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಚುನಾವಣೆ ನಮ್ಮ ಜಾಗೃತಿಯ ಸಂಕೇತವೂ ಆಗಿದೆ. ಸಂವಿಧಾನ ಅಪ್ಪಿಕೊಂಡು ಮನುಸ್ಮೃತಿಗೆ ಕೊಳ್ಳಿ ಇಡಬೇಕಾಗಿದೆ. ಸಂಘ ಪರಿವಾರದ ಹಿಂದೂ ರಾಷ್ಟ್ರದ ವಿರುದ್ಧ ಹೋರಾಟದಲ್ಲಿ ಬಹುಮುಖ ಪಾತ್ರ ವಹಿಸಬೇಕಾದವರು ದಲಿತರು. ಹಿಂದೂ ರಾಷ್ಟ್ರ ಬ್ರಾಹ್ಮಣವಾದದ ಹೆಗಲ ಮೇಲೆ ನಿಂತಿರುವ ಕನಸು. ಇದನ್ನು ನಾಶಮಾಡಲು ದಲಿತರು, ಮುಸ್ಲಿಮರು ಒಂದಾಗಬೇಕಾಗಿದೆ ಎಂದರು.
ಸಂವಿಧಾನ ಮರೆತರೆ ಭಾರತೀಯರಾದ ನಮಗೆ ಭವಿಷ್ಯವಿಲ್ಲ, ಸಂವಿಧಾನ ಉಳಿವಿಗೆ ಎರಡನೇ ಸ್ವಾತಂತ್ರ್ಯ ಸಂಗ್ರಾಮದಂಥ ಹೋರಾಟದ ಅಗತ್ಯವಿದೆ. ಅಂದು ಮಹಿಳಾ ವಿಮೋಚನೆಗಾಗಿ ಅಂಬೇಡ್ಕರ್‌ರವರ ಕೊಡುಗೆ ಅಮೂಲ್ಯವಾಗಿತ್ತು. ಆದರೆ, ಇಂದು ದಲಿತ ಚಳವಳಿ ದುಡ್ಡಿದ್ದವರ ಪಾಲಾಗಿದೆ. ಸ್ವಾರ್ಥ ನಾಯಕರು ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದರು.
ಹಿರಿಯ ದಲಿತ ಚಿಂತಕ ನಾರಾಯಾಣ ಮಣೂರು ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಕೊಳೆಯುತ್ತಿರುವ ಭಾರತಕ್ಕೆ ಅಂಬೇಡ್ಕರ್ ನಿಜವಾದ ಮದ್ದನ್ನು ನೀಡಿದ್ದಾರೆ. ನಾವು ಸಂವಿಧಾನವನ್ನು ಉಳಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು ಮಾತನಾಡಿ, ದೇಶದ ತುಂಬಾ ಭ್ರಷ್ಟಾಚಾರ ತಲೆಯೆತ್ತಿದೆ. ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಯಾವುದನ್ನೂ ತಡೆಗಟ್ಟಲಾಗದವರು, ದೇವರು ಧರ್ಮದ ಮೂಲಕ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದರು.
ಹಿರಿಯ ದಲಿತ ಹೋರಾಟಗಾರ ಶೇಖರ ಹೆಜಮಾಡಿ ಮಾತನಾಡಿ, ಸಂವಿಧಾನದ ಸ್ಪೂರ್ತಿಯಂತೆ ಆಡಳಿತಗಾರರು ನಡೆದುಕೊಂಡಿಲ್ಲ. ಅವರ ವೈಫಲ್ಯವನ್ನು ಮುಚ್ಚಲು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿದರು.
ಮಲ್ಪೆ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್ ಮತ್ತು ಸುನೀಲ್ ಡಿಸೋಜ ರ್‍ಯಾಲಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ಕೊಡವೂರು, ಪ್ರಸಾದ್ ಕಾಂಚನ್, ಪ್ರಖ್ಯಾತ ಶೆಟ್ಟಿ, ಮಹಾಬಲ ಕುಂದರ್, ರಮೇಶ್ ಕಾಂಚನ್, ಬ್ರಹ್ಮಶ್ರೀ ವಿಚಾರ ವೇದಿಕೆಯ ಸದಾಶಿವ ಕಟ್ಟೆಗುಡ್ಡೆ, ಮೀನಾಕ್ಷೀ ಮಾಧವನ್ ಮುಂತಾದವರು ಉಪಸ್ಥಿತರಿದ್ಧರು.
ಭೀಮಯಾನ ಈ ಮಹಾ ರ್‍ಯಾಲಿಯಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ಗಣೇಶ್ ನೆರ್ಗಿ, ರವಿ ಲಕ್ಷ್ಮೀಂದ್ರನಗರರ, ಸುಧಾಕರ ಬಾಪುತೋಟ, ಅರುಣ್ ಸಾಲ್ಯಾನ್, ಸತೀಶ್ ಮಂಚಿ, ದೀಪಕ್ ಕೊಡವೂರು, ಸಾಧು ಚಿಟ್ಪಾಡಿ, ಸತೀಶ್ ಕಪ್ಪೆಟ್ಟು, ಭಗವಾನ್ ಮಲ್ಪೆ, ಸುಕೇಶ್ ಪುತ್ತೂರು, ಶಿಶಿಕಲಾ ತೊಟ್ಟಂ, ಸಂಧ್ಯಾ ತಿಲಕ್‌ರಾಜ್, ಸುರೇಶ್ ಚಿಟ್ಪಾಡಿ, ಬಿ.ಎನ್. ಪ್ರಶಾಂತ್, ಮುಂತಾದ ನಾಯಕರು ಭಾಗವಹಿಸಿದ್ದರು, ದಯಾಕರ್ ಮಲ್ಪೆ ಸ್ವಾಗತಿಸಿ, ಅಶೋಕ್ ಪುತೂರು ವಂದಿಸಿದರು.
ವೈಭವದ ಭೀಮಯಾನ ರ್‍ಯಾಲಿ
ಜಿಲ್ಲೆಯ ವಿವಿಧ ಭಾಗಳಿಂದ ಬೈಕ್, ಕಾರು, ಜೀಪ್, ರಿಕ್ಷಾ ಮುಂತಾದ ವಾಹನಗಳಲ್ಲಿ ಬಂದ ಕಾರ್ಯಕರ್ತರು, ಸಿಂಗಾರಗೊಂಡ ಅಂಬೇಡ್ಕರ್ ಟ್ಯಾಬ್ಲೊ ಹಾಗೂ ಡೀಜಿ, ಚಂಡೆ, ತಮಟೆ, ನಾಸಿಕ್ ಬ್ಯಾಂಟ್‌ನೊಂದಿಗೆ ಸಾಗಿದರು.
