ಕೆಡಿಪಿ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ದುರ್ವರ್ತನೆ ತೋರಿದ ಶಾಸಕ ಸುನಿಲ್ ಕುಮಾರ್ ನಡೆ ನಾಚೀಕೆಗೇಡು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಉಡುಪಿ ಜಿಲ್ಲೆಯ ಅಭಿವೃದ್ದಿಗಳ ಬಗ್ಗೆ ಗಂಭೀರ ಚರ್ಚೆ ಮಾಡಬೇಕಾದ ಕೆಡಿಪಿ ಸಭೆಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಜವಬ್ದಾರಿಯುತ ಸ್ಥಾನದಲ್ಲಿರುವ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಕೀಳು ಮಟ್ಟದ ಸಂಭಾಷಣೆಗಳನ್ನು ಬಳಸಿ ಜಿಲ್ಲೆಯ ಓರ್ವ ನಿಷ್ಠಾವಂತ ಪೊಲೀಸ್ ಅಧಿಕಾರಿಯೊಬ್ಬರ ಜೊತೆ ನಡೆದುಕೊಂಡಿರುವ ಅಸಭ್ಯ ವರ್ತನೆ ಇಡೀ ಜಿಲ್ಲೆಯ ಜನ ತಲೆತಗ್ಗಿಸುವಂತಾಗಿದೆ” ಎಂದು ಹೇಳಿದರು.
“ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಉನ್ನತ ಅಧಿಕಾರಿಗಳು ಸೇರಿರುವ ಕೆಡಿಪಿ ಸಭೆಯಲ್ಲಿ ತನ್ನನ್ನು ಗೆಲ್ಲಿಸಿರುವ ಕ್ಷೇತ್ರದ ಅಭಿವೃದ್ದಿ ಬಗ್ಗೆ ಮಾತನಾಡಬೇಕಾಗಿತ್ತು. ಅದನ್ನು ಬಿಟ್ಟು ಅಧಿಕಾರಿಗಳ ಜೊತೆ ತಾನೊಬ್ಬ ಜವಬ್ದಾರಿಯುತ ಜನಪ್ರತಿನಿದಿ ಎನ್ನುವುದನ್ನು ಮರೆತು ಅನಾಗರಿಕರಂತೆ ವರ್ತಿಸಿರುವುದು ಖಂಡನೀಯ” ಎಂದರು.
“ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಡು ಭ್ರಷ್ಟತೆಯಲ್ಲಿ ತೊಡಗಿ ದರ್ಪ, ಅಹಂಕಾರದಿಂದ ಮೆರೆದು ಅಧಿಕಾರ ಕಳೆದುಕೊಂಡರೂ ಇವರಿಗೆ ಇನ್ನೂ ಬುದ್ದಿ ಬಂದಿಲ್ಲ. ತಮ್ಮ ಆಡಳಿತಾವಧಿಯಲ್ಲಿ ಇಡೀ ಜಿಲ್ಲೆಯಲ್ಲೇ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ತಮ್ಮ ಕಾನೂನು ಬಾಹಿರ ಚಟುವಟಿಕೆಗಳನ್ನು ರಾಜಾರೋಷವಾಗಿ ಮಾಡಿಸಿಕೊಳ್ಳುತ್ತಿದ್ದ ಬಿಜಿಪಿ ಶಾಸಕರಿಗೆ ಇಂದು ಕಾನೂನು, ಕಟ್ಟಳೆಗಳನ್ನು ಅನುಸರಿಸುವುದು ಕಷ್ಟವಾಗುತ್ತಿದ್ದಂತಿದೆ ಎನ್ನುವುದರ ಉದಾಹರಣೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆದುಕೊಂಡ ರೀತಿಯನ್ನು ತೋರಿಸುತ್ತದೆ” ಎಂದು ಹೇಳಿದರು.
“ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್ ಮಾಡುವಾಗ ಅಧಿಕಾರಿಗಳು ಇವರ ತಾಳಕ್ಕೆ ಕುಣಿಯಲಿಲ್ಲ ಎಂದಾಗ ಅವರನ್ನು ಹೀನಾಯವಾಗಿ ಬೈದು, ಬೆದರಿಸಿ ಬೋಗಸ್ ಪ್ರತಿಮೆಯನ್ನು ಸ್ಥಾಪಿಸಿದರು. ಅದೇ ರೀತಿ ಕಾಂಗ್ರೆಸ್ ಸರ್ಕಾರದಲ್ಲೂ ಜಿಲ್ಲೆಯಲ್ಲಿನ ಪ್ರಾಮಾಣಿಕ ಅಧಿಕಾರಿಗಳು ಇವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಹಕರಿಸುತ್ತಿಲ್ಲವೆಂದು ಪ್ರಾಮಾಣಿಕ ಅಧಿಕಾರಿಗಳನ್ನು ಕೆಡಿಪಿಯಂತಹ ಅಭಿವೃದ್ಧಿಪರ ಚಿಂತನೆ ಮಾಡಬೇಕಾದ ಸಭೆಗಳಲ್ಲಿ ಅನಗತ್ಯವಾಗಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಹೆದರಿಸಿ ಬೆದರಿಸುವ ತಂತ್ರಕ್ಕೆ ಮೊರೆಹೋಗಿರುವುದು ಶಾಸಕರ ಘನತೆಗೆ ಸರಿಯಾದ ನಡೆಯಲ್ಲ” ಎಂದು ಹೇಳಿದರು.
“ಬಿಜೆಪಿ ಹಿಂದುತ್ವದ ಪಕ್ಷ ಎಂದುಕೊಂಡೇ ಹಿಂದೂತ್ವವಾದಿ ಪ್ರಮೋದ್ ಮುತಾಲಿಕ್ ಅವರು ಪ್ರತಿಭಟನೆಗೆ ಬರುವಾಗ ಅವರನ್ನು ಉಡುಪಿಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಿದ ಬಿಜೆಪಿಯ ಶಾಸಕರು ಈಗ ಯಾವ ಮುಖವಿಟ್ಟು ಹೇಗೆ ಪ್ರತಿಭಟನೆ ಮಾಡಬೇಕು ಎಂದು ಕಾಂಗ್ರೆಸ್ ಸರ್ಕಾರ ಗೈಡ್ ಲೈನ್ಸ್ ಹೊರಡಿಸಬೇಕು ಎಂದು ಕೇಳುತ್ತಿದ್ದೀರಿ. ಈ ಹಿಂದೆ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ ರೈತರ ಮೇಲೆ ಕಾರು ಹತ್ತಿಸಿದ ನಿಮ್ಮ ಪಕ್ಷದವನನ್ನು ಏನು ಮಾಡಿದಿರಿ?. ಪ್ರತಿಭಟನೆ ಮಾಡಿದ ಕುಸ್ತಿ ಪಟುಗಳನ್ನು ಏನು ಮಾಡಿದಿರಿ ಅಂತ ಜಗತ್ತಿಗೆ ತಿಳಿದಿದೆ. ಇಲ್ಲಿ ಮಾತ್ರ ನಿಮಗೆ ಪ್ರಜಾಪ್ರಭುತ್ವ ನೆನಪಾಗುಗುವದೇ? ನಿಮ್ಮ ಉತ್ತರ ಪ್ರದೇಶದಲ್ಲಿ ಮಾತಾಡಿದವರ ಮನೆಗೆ ಬುಲ್ಡೋಜ಼ರ್ ನುಗ್ಗಿಸಿದ ನಿಮಗೆ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕ ಹಕ್ಕಿದೆಯಾ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬ ಧೋರಣೆ ಸಹಿಸಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
“ಶಾಸಕರೇ, ಪ್ರಸ್ತುತ ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ. ನಾವು ಪ್ರಜಾಪ್ರಭುತ್ವದ ಅಡಿಯಲ್ಲಿ ಸಂವಿಧಾನ ಗೌರವಿಸಿ ಕೆಲಸ ಮಾಡುತ್ತಿದ್ದೇವೆ. ಪ್ರತಿಭಟನೆ ಹೇಗೆ ಮಾಡಬೇಕೆಂದು ನಮಗೆ ಗೊತ್ತಿದೆ. ಆದರೆ ನಿಮ್ಮಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ನಾವು ಅಧಿಕಾರಿಗಳನ್ನು ಬಳಸಿಕೊಳ್ಳುವುದಿಲ್ಲ. ನಿಮ್ಮ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ಹೇಗೆ ನಡಿಸಿಕೊಂಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಇಂದಿಗೂ ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಬಂದಿಲ್ಲ. ಅದೆಲ್ಲಾ ನಿಮ್ಮ ಚಾಳಿ ಅವರ ಕೆಲಸವನ್ನು ಮಾಡಲು ಬಿಡದೆ ಬೆದರಿಕೆ ಒಡ್ಡುವುದು ನಿಮ್ಮ ಜಾಯಮಾನವಾಗಿದೆ” ಎಂದು ಆರೋಪಿಸಿದರು.
“ಜಿಲ್ಲೆಯ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಸಹಿತ ಎಲ್ಲ ಇತರ ದಕ್ಷ ಅಧಿಕಾರಿಗಳೊಂದಿಗೆ ಇಡೀ ಉಡುಪಿ ಜಿಲ್ಲೆಯ ಜನರು ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನುವುದನ್ನು ಅರಿತು ಅಭಿವೃದ್ಧಿಪರ ಜಿಲ್ಲೆಯಾಗಲು ಸಹಕಾರ ನೀಡುವ ಕೆಲಸವನ್ನು ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಮಾಡಲಿ” ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪ್ರಕಟಣೆಗೆ ತಿಳಿಸಿದ್ದಾರೆ.