ಮೊಗೇರ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ-1ರ ಪಟ್ಟಿಯಿಂದ ಕೈ ಬಿಡದಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಮಾತನಾಡಿ, “ಮೊಗೇರ ಸಮುದಾಯವನ್ನು ಹಿಂದುಳಿದ ವರ್ಗಗಳ ಜಾತಿ ಮೀಸಲಾತಿ ಪ್ರವರ್ಗ-1ರ ಪಟ್ಟಿಯಿಂದ ತೆಗೆಯುವ ಬಗ್ಗೆ ಸಾರ್ವಜನಿಕ, ಸಂಘ ಸಂಸ್ಥೆಗಳಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ. ಸರ್ಕಾರದ ಈ ಪ್ರಕಟಣೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಪ್ರವರ್ಗ-1ರಿಂದ ತೆಗೆಯಬಾರದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೇಳಿದಂತೆ ಮೊಗೇರ ಸಮುದಾಯ ರಾಜ್ಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದಕ್ಷಿಣ ಕನ್ನಡ ಜಿಲ್ಲೆ, ಕೊಳ್ಳೇಗಾಲ ಭಾಗದಲ್ಲಿ ಮೊಲ ಬೇಟೆ ವೃತ್ತಿಯವರಾಗಿದ್ದ ಮೊಗೇರರು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರು. ಅವರನ್ನು ತುಳಿತಕ್ಕೊಳಪಟ್ಟ ಜಾತಿ ಎಂದು ಸರ್ಕಾರ ಪರಿಗಣಿಸಿ ಪರಿಶಿಷ್ಟ ಜಾತಿ ಜನಾಂಗವೆಂದು ಗುರುತಿಸಿದೆ. ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ವೃತ್ತಿಯ ಮೊಗೇರ ಸಮಾಜದಲ್ಲಿ ಅಸ್ಪಶ್ಯತೆಯ ನೋವನ್ನು ಅನುಭವಿಸಿದವರೂ ಅಲ್ಲ. ಇವರು ಮೀಸಲಾತಿಗೆ ಅರ್ಹರಲ್ಲ. ಈ ಎರಡು ಪಂಗಡಗಳು ಬೇರೆ ಎಂಬುದರ ಬಗ್ಗೆ ಈಗಾಗಲೇ ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರಜ್ಞ ಎಚ್ ಕೆ ಭಟ್ ಸರ್ಕಾರಕ್ಕೆ ನೀಡಿದ ವರದಿಯಿಂದ ಸಾಬೀತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ದೇವದಾಸಿಯರ ಬೇಡಿಕೆ ಈಡೇರಿಕೆಗೆ ಆಗ್ರಹ
“ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ವೃತ್ತಿಯ ಮೊಗೇರರು ಸಾಕಷ್ಟು ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಸವಲತ್ತುಗಳನ್ನು ಪಡೆದಿದ್ದಾರೆ. ಇದರಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗಿದೆ. ಸರ್ಕಾರ ಈ ಬಗ್ಗೆ ಸ್ಪಷ್ಟವಾಗಿ ಅರಿತುಕೊಂಡು ತೀರ್ಮಾನ ತೆಗೆದುಕೊಳ್ಳಬೇಕು. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇತರೆ ಮೀನುಗಾರ ವೃತ್ತಿಯ ಜಾತಿಗಳೊಂದಿಗೆ ಸೂಚಿತವಾಗಿರುವ ಮೊಗೇರ ಪಂಗಡವನ್ನು ಹಿಂದುಳಿದ ವರ್ಗದ ಪಟ್ಟಿಯಿಂದ ತೆಗೆದು ಹಾಕಬಾರದು” ಎಂದು ಹಿಂದುಳಿದ ವರ್ಗಗಳ ಆಯೋಗಕ್ಕೆ ಒತ್ತಾಯಿಸಿದರು.
ಮುಖಂಡರುಗಳಾದ ಸುಂದರ್ ಮಾಸ್ತರ್, ಶ್ಯಾಮರಾಜ ಬಿರ್ತಿ, ವಿಶ್ವನಾಥ್ ಬೆಳ್ಳಂಪಳ್ಳಿ, ರಮೇಶ್ ಕೆಳಾರ್ಕಳಬೆಟ್ಟು, ಆನಂದ ಬ್ರಹ್ಮಾವರ, ವಾಸುದೇವ ಮುದೂರು ಇದ್ದರು.