ನೈತಿಕತೆಯ ಜೀವನದಿಂದ ಸಮಾಜದೊಳಗೆ ಸಾಮರಸ್ಯ, ಪ್ರೀತಿ, ವಿಶ್ವಾಸ , ಸಮಾನತೆ ಮೂಡಿ ಬರಲು ಸಾಧ್ಯವಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲೆಯ ಮಹಿಳಾ ವಿಭಾಗದ ಸಂಚಾಲಕರಾದ ಕುಲ್ಸುಮ್ ಅಬೂಬಕ್ಕರ್ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಹಮ್ಮಿಕೊಂಡಿರುವ “ನೈತಿಕತೆಯೇ ಸ್ವಾತಂತ್ರ್ಯದ ಭರವಸೆ” ಅಭಿಯಾನ ಪ್ರಯುಕ್ತ ಕಾಪು ಘಟಕದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರವೆಂದರೆ ತನ್ನ ಮನೋಭಿಲಾಷೆಯನ್ನು ಈಡೇರಿಸಲು ಯಾವುದೇ ವಾಮ ಮಾರ್ಗದಲ್ಲಿ ನಡೆದು ಅದನ್ನು ಗಳಿಸಿ ತನ್ನ ವಾಂಚ್ಛೆಯನ್ನು ತೀರಿಸಿಕೊಳ್ಳುವುದಲ್ಲ. ನಮ್ಮ ಜೀವನವು ಇಹಲೋಕಕ್ಕೆ ಮಾತ್ರ ಸೀಮಿತವಲ್ಲ. ಇಲ್ಲಿಯ ಎಲ್ಲ ಕರ್ಮಗಳ ಲೆಕ್ಕವನ್ನು ಪರಲೋಕದಲ್ಲಿ ಸೃಷ್ಟಿಕರ್ತನಿಗೆ ಕೊಡಲು ಇದೆ ಎನ್ನುವ ಯೋಚನೆ ಮನುಷ್ಯನಲ್ಲಿ ಇಬೇಕು. ಆ ಯೋಚನೆ ಇದ್ದಾಗ ಆತ ಸಮಾಜದಲ್ಲಿ ಗೌರವಯುತ ಜೀವನಕ್ಕಾಗಿ ನೈತಿಕತೆಯನ್ನು ಅಳವಡಿಸಿಕೊಳ್ಳಲು ಮುಂದೆ ಬರುತ್ತಾನೆ. ಅಂತಹ ವಾತಾವರಣವನ್ನು ಪ್ರತಿಯೊಬ್ಬ ಮನುಷ್ಯ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾವಿತ್ರಿ ಗಣೇಶ್ ಮಾತನಾಡುತ್ತಾ, ಮಹಿಳೆಯರಾದ ನಾವು ಸಮಾಜದಲ್ಲಿ ಸತ್ಯ, ನ್ಯಾಯ, ನಿಷ್ಠೆ, ಕಾರ್ಯಕ್ಷಮತೆ, ಬದ್ಧತೆ ಇವುಗಳಿಗೆ ಒಗ್ಗಿಕೊಂಡು ಹೋದರೆ, ಸಮಾಜ ನಮ್ಮನ್ನು ಮುಂದೆ ಹೋಗಲು ಸಹಕರಿಸುತ್ತದೆ ಹಾಗೂ ಗೌರವಿಸುತ್ತದೆ ಎಂದರು.
ಮೋನಿಕಾ ಕರ್ನೆಲಿಯೊ ಮಾತನಾಡಿ, ನಾವು ಚಿಕ್ಕವರಿರುರುವಾಗ ಡ್ರಗ್ಸ್ ಅಂದರೆ ಆರೋಗ್ಯ ಗುಣ ಪಡಿಸಲು ಕೊಡುವ ಔಷಧ ಆಗಿತ್ತು. ಆದರೆ ಇಂದು ಆರೋಗ್ಯವನ್ನು ಮತ್ತು ಸಮಾಜವನ್ನು ನಾಶ ಪಡಿಸುವ ಮಾದಕ ದ್ರವ್ಯ ಆಗಿದೆ. ಇದರ ಬಗ್ಗೆ ಮಹಿಳೆಯರು ಅದರ ವಿರುದ್ಧ ಟೊಂಕ ಕಟ್ಟಿ ನಿಲ್ಲಬೇಕು ಎಂದರು.
ಇನ್ನೊರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಳುನಾಡ ವೆಬ್ ಚಾನೆಲ್‌ನ ಮಾಲಕಿ ಯಶೋಧ ಕೇಶವ್, ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಮಹಿಳೆಯರಿಗೆ ಸರಿಯಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಕೇವಲ ಅವರು ವೇದಿಕೆಗೆ ಮೀಸಲಾಗಿದ್ದಾರೆ. ನಾವು ನಮ್ಮ ನೈತಿಕ ಮೇರೆಯ ಒಳಗಿದ್ದು, ನಮ್ಮ ಮನೆಯಿಂದಲೇ ಹೋರಾಟ ಮಾಡಬೇಕು” ಎಂದು ತುಳು ಭಾಷೆಯಲ್ಲಿ ಹೇಳಿದರು.
ಉಡುಪಿ ಜಿಲ್ಲಾ ಮಹಿಳಾ ಸಹ ಸಂಚಾಲಕರಾದ ರೇಷ್ಮಾ ಬೈಲೂರು ಸಮಾರೋಪ ನುಡಿಗಳನ್ನಾಡುತ್ತಾ, ಬದುಕಿನಲ್ಲಿ ಅಳವಡಿಸಿರುವ ಗುಣಗಳಿಗೆ ಬೆಲೆ ಬರಬೇಕಾದರೆ, ಮನುಷ್ಯನು ತನ್ನಲ್ಲಿ ಉನ್ನತ ಮಟ್ಟದ ನೈತಿಕತೆಯನ್ನು ಹೊಂದಿರಬೇಕು. ಕುಟುಂಬದ ಹಿರಿಯರು ಉನ್ನತ ಮಟ್ಟದಲ್ಲಿ ಚಾರಿತ್ರ್ಯವಂತರಾದರೆ, ಅದರ ಪ್ರಭಾವ ಅವರ ಕುಟುಂಬ ಮತ್ತು ಅವರು ವಾಸಿಸುವ ಸಮಾಜದಲ್ಲಿ ಪರಿಣಾಮ ಬೀರುತ್ತದೆ. ಅವಾಗ ಒಂದು ಉತ್ತಮ ಸಮಾಜ ನಿರ್ಮಾಣ ಆಗಲು ಸಾಧ್ಯವಿದೆ ಎಂದರು.
ಇದನ್ನು ಓದಿದ್ದೀರಾ? ನ್ಯಾಯಾಧೀಶರ ವಿವಾದಾತ್ಮಕ ಹೇಳಿಕೆ ವೈರಲ್ | ಅನುಮತಿ ಇಲ್ಲದೆ ಕಲಾಪದ ವಿಡಿಯೋ ಬಳಕೆಗೆ ಹೈಕೋರ್ಟ್ ಕೊಕ್ಕೆ
ಪುರಸಭಾ ಸದಸ್ಯೆಯರಾದ ಮೋಹಿನಿ ಶೆಟ್ಟಿ ಮತ್ತು ಸುಲೋಚನಾ ಬಂಗೇರಾರವರು ಅಭಿಯಾನಕ್ಕೆ ಶುಭ ಹಾರೈಸಿದರು. ಮಾಜಿದಾ ಮಲ್ಪೆಯವರು ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಕುರ್‌ಆನ್ ಪಠಣ ಮಾಡಿದರು. ರಹಮತುನ್ನಿಸಾರವರು ಅನುವಾದ ಮಾಡಿದರು. ಕಾಪು ಸ್ಥಾನೀ ಸಂಚಾಲಕರಾದ ಶೆಹನಾಝ್‌ರವರು ಸ್ವಾಗತ ಭಾಷಣ ಮಾಡಿ, ಕಾರ್ಯಕ್ರಮ ನಿರೂಪಿಸಿದರು. ಮಸ್ನಾ ಮೂಳೂರು ಧನ್ಯವಾದವಿತ್ತರು. ವೇದಿಕೆಯಲ್ಲಿ, ಪುರಸಭಾ ಸದಸ್ಯರುಗಳಾದ ಶಾಂತಲತಾ ಶೆಟ್ಟಿ, ವಿದ್ಯಾ ಆನಂದ್, ಅಶ್ವಿನಿ ಬಂಗೇರಾ ಉಪಸ್ಥಿತರಿದ್ದರು.
