ಉಡುಪಿ ಸಮೀಪದ ನೇಜಾರುವಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಎರಡನೇ ಬಾರಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿ ಇಂದು ಆದೇಶ ಹೊರಡಿಸಿದೆ.
ಚೌಗುಲೆ ಮಾರ್ಚ್ 13ರಂದು ಎರಡನೇ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಮಾರ್ಚ್ 27ರಂದು ಆಕ್ಷೇಪಣೆ ಸಲ್ಲಿಸಿದ್ದರು. ಈ ಕುರಿತು ಆರೋಪಿಪರ ವಕೀಲ ರಾಜೇಶ್ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ಮಧ್ಯೆ ವಾದ ಪ್ರತಿವಾದಗಳು ನಡೆದವು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಜಾಮೀನು ಅರ್ಜಿಯ ಕುರಿತ ಅಂತಿಮ ಆದೇಶವನ್ನು ಮಾರ್ಚ್ 30ಕ್ಕೆ ನಿಗದಿಪಡಿಸಿ ಆದೇಶ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೋಮುವಾದಿ ಬಿಜೆಪಿ ಜೊತೆ ಸೇರಿದ ‘ಎಚ್‌ಡಿಕೆ’ಗಿಲ್ಲ ಬೆಂಬಲ; ಕಾಂಗ್ರೆಸ್‌ಗೆ ಜೈ ಎಂದ ದಲಿತ ಸಂಘಟನೆಗಳು
ಆರೋಪಿ ಮೇಲಿನ ಆರೋಪಗಳು ಎಫ್‌ಎಸ್‌ಎಲ್ ವರದಿ ಸೇರಿದಂತೆ ಇನ್ನಿತರ ಸಾಕ್ಷ್ಯಗಳಿಂದ ಮೇಲ್ನೋಟಕ್ಕೆ ಕಂಡುಬಂದಿದ್ದು, ಜಾಮೀನು ನೀಡಿದರೆ ಸಾಕ್ಷ್ಯಗಳಿಗೆ ಹೆದರಿಸುವ ಸಾಧ್ಯತೆ ಇದೆ. ನ್ಯಾಯಾಂಗ ಬಂಧನದಲ್ಲೂ ಆರೋಪಿಗೆ ಚಿಕಿತ್ಸೆ ಪಡೆಯುವ ಅವಕಾಶ ಇರುವುದರಿಂದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದಾಗಿ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
