ಕಳೆದ ನ.12ರಂದು ಉಡುಪಿಯ ನೇಜಾರಿನಲ್ಲಿ ತಾಯಿ ಹಾಗೂ ಮೂವರು ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕೆ, ‘ಗಂಭೀರ ಪ್ರಕರಣವಾಗಿರುವುದರಿಂದ ಆರೋಪಿಗೆ ಪ್ರತ್ಯೇಕ ಸೆಲ್ ಜೊತೆ ಬಿಗಿ ಬಂದೋಬಸ್ತ್ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಉಡುಪಿಯ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನೇಜಾರು ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿದೆ. ಆತನನ್ನು ಹಿರಿಯಡ್ಕ ಜೈಲಿನಲ್ಲಿಡಲಾಗಿದ್ದು ಪ್ರತ್ಯೇಕ ಸೆಲ್ ಜೊತೆಗೆ ಬಿಗಿ ಬಂದೋಬಸ್ತ್ ಮಾಡುತ್ತೇವೆ. ಇತರ ಕೈದಿಗಳೊಂದಿಗೆ ಇಟ್ಟರೆ ದಾಳಿಯ ಸಾಧ್ಯತೆ ಇದ್ದ ಕಾರಣ ಭದ್ರತೆಯೊಂದಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಈ ಬಗ್ಗೆ ಬಂದೀಖಾನೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಗಂಭೀರ ಪ್ರಕರಣವಾಗಿರುವುದರಿಂದ ಪ್ರತ್ಯೇಕ ಸೆಲ್ ಜೊತೆಗೆ ಸಿಸಿಟಿವಿ ಕೂಡ ಅಳವಡಿಸುವ ಬಗ್ಗೆಯೂ ಮಾಹಿತಿ ನೀಡಿದ್ದೇವೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ | 142 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಪ್ರಾಂಶುಪಾಲನ ಬಂಧನ
ಕೊಲೆಗೈಯ್ಯಲ್ಪಟ್ಟ ನಾಲ್ವರ ಪೈಕಿ ಐನಾಝ್ ಹಾಗೂ ಆರೋಪಿ ಪ್ರವೀಣ್ ಚೌಗುಲೆ ಒಂದೇ ಕಡೆ ಕೆಲಸ ಮಾಡ್ತಾ ಇದ್ದಿದ್ದರಿಂದ ಇಬ್ಬರೂ ಸ್ನೇಹಿತರಾಗಿದ್ದರು. ಕಳೆದ ಒಂದು ತಿಂಗಳಿನಿಂದ ಐನಾಝ್ ಆತನ ಜೊತೆ ಮಾತನಾಡುತ್ತಿರಲಿಲ್ಲ. ಐನಾಝ್ ತನ್ನ ನಿಯಂತ್ರಣದಲ್ಲಿರಬೇಕೆಂಬ ಪ್ರವೀಣ್ ಮನೋಭಾವವೇ ಈ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆ ಕೃತ್ಯ ನಡೆಸಿದ ಬಳಿಕ ಆಶ್ರಯ ಕೊಟ್ಟವರಿಗೆ ಕೊಲೆ ನಡೆಸಿದ ಬಗ್ಗೆ ಮಾಹಿತಿ ಇರಲಿಲ್ಲ. ಅವರು ಆರೋಪಿ ಪ್ರವೀಣ್ ಪತ್ನಿಯ ಸಂಬಂಧಿಕರಾಗಿದ್ದರು. ಸದ್ಯ ಎಲ್ಲ ತನಿಖೆ ಮುಕ್ತಾಯಗೊಳಿಸಿದ್ದೇವೆ. ವಾರದೊಳಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಿದ್ದೇವೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ತಿಳಿಸಿದ್ದಾರೆ.
ಕಳೆದ ನ.12ರಂದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39)ಗೆ ನ್ಯಾಯಾಲಯವು 14 ದಿನಗಳ ಕಾಲ(ಡಿ.5ರವರೆಗೆ) ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದ್ದು, ಕೈದಿ ಸಂಖ್ಯೆ 8936 ಅನ್ನು ಪ್ರವೀಣ್ ಚೌಗಲೆಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.