ಉಡುಪಿಯ ಖಾಸಗಿ ಕಾಲೇಜೊಂದರಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ನೀಡುತ್ತಿರುವ ಹೇಳಿಕೆಗಳು ದ್ವೇಷ ಮತ್ತು ಸುಳ್ಳುಗಳಿಂದ ಕೂಡಿವೆ. ಘಟನೆಯ ಬಗ್ಗೆ ಅವರ ಧೋರಣೆ ಅತ್ಯಂತ ಪ್ರಚೋದನಕಾರಿ ಮತ್ತು ದುಷ್ಟ ಉದ್ದೇಶದಿಂದ ಕೂಡಿದೆ. ಸುಳ್ಳು-ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಒತ್ತಾಯಿಸಿದ್ದಾರೆ.
ಉಡುಪಿ ಘಟನೆಯ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಖಾಸಗಿಕಾಲೇಜೊಂದರ ಮೂವರು ವಿದ್ಯಾರ್ಥಿನಿಯರು ಮಾಡಿದ್ದಾರೆ ಎನ್ನಲಾದ ಕೃತ್ಯವು ತೀರಾ ಬೇಜವಾಬ್ದಾರಿಯುತ ಹಾಗೂ ಬಾಲಿಶವಾದುದು. ಆದರೆ, ಆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಷ್ಟೇ ಜವಾಬ್ದಾರಿಯುತವಾಗಿ ಹಾಗೂ ವಿವೇಕಯುತವಾಗಿ ಇಡೀ ಪ್ರಕರಣವನ್ನು ನಿಭಾಯಿಸಿದ್ದಾರೆ. ಸಂಬಂಧಿಸಿದ ವಿಡಿಯೋವನ್ನು ತಕ್ಷಣ ಡಿಲೀಟ್ ಮಾಡಿಸಿದ್ದಾರೆ. ತಮಾಷೆಗಾಗಿ ಆ ವೀಡಿಯೊ ಮಾಡಿದ ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿ ಕಾಲೇಜಿನಿಂದ ಅಮಾನತು ಮಾಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅವರ ಭವಿಷ್ಯದ ಕುರಿತು ಪ್ರಾಮಾಣಿಕ ಕಳಕಳಿ ಇರುವ ಯಾವುದೇ ಜವಾಬ್ದಾರಿಯುತ ಶೈಕ್ಷಣಿಕ ಸಂಸ್ಥೆ ನಡೆದುಕೊಳ್ಳಬೇಕಾದ ರೀತಿಯಲ್ಲೇ ಆ ಕಾಲೇಜು ನಡೆದುಕೊಂಡಿದೆ. ಆದರೆ, ಆ ಪ್ರಕರಣವನ್ನು ಕೆಲವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚ್ಚೀಂದ್ರ ಅವರ ನೇತೃತ್ವದ ಪೊಲೀಸರು, ಎಲ್ಲ ವಾಸ್ತವಾಂಶಗಳನ್ನು ಜನರ ಮುಂದಿಟ್ಟಿದ್ದಾರೆ. ಅಲ್ಲಿ ಯಾವುದೇ ಹಿಡನ್ ಕ್ಯಾಮರಾ ಇರಲಿಲ್ಲ. ಯಾರಿಗೂ ಯಾವುದೇ ರೀತಿಯಲ್ಲಿ ಬ್ಲ್ಯಾಕ್‌ಮೇಲ್ ನಡೆದಿಲ್ಲ. ವೀಡಿಯೊ ಆಗಲೇ ಡಿಲೀಟ್ ಮಾಡಲಾಗಿದ್ದು, ಅದು ಅಲ್ಲಿಂದ ಯಾರಿಗೂ ಹೋಗಿಲ್ಲ. ಕೇವಲ ತಮಾಷೆಗಾಗಿ ವಿದ್ಯಾರ್ಥಿನಿಯರು ಮಾಡಿಕೊಂಡಿರುವ ಪ್ರಕರಣ ಇದು. ಹಾಗಾಗಿ ಆ ವಿದ್ಯಾರ್ಥಿನಿ ತನ್ನ ಹಾಗೂ ಸಹಪಾಠಿಗಳ ಭವಿಷ್ಯದ ದೃಷ್ಟಿಯಿಂದ ಯಾವುದೇ ದೂರು ದಾಖಲಿಸಿಲ್ಲವೆಂದು ಎಸ್‌ಪಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಇಡೀ ಪ್ರಕರಣಕ್ಕೆ ಇಲ್ಲದ ಕೋಮುವಾದಿ ಬಣ್ಣ ಬಳಿದು, ರಾಜಕೀಯ ಮಾಡಲಾಗುತ್ತಿದೆ” ಎಂದು ಬಿಜೆಪಿ ಮತ್ತು ಹಿಂದುತ್ವವಾದಿ ಸಂಘಟನೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
“ಬಿಜೆಪಿಯ ಸಾಮಾಜಿಕ ಜಾಲತಾಣ ಪಡೆ ಹಸಿ ಹಸಿ ಸುಳ್ಳುಗಳನ್ನು ಹರಡುತ್ತಿರುವುದು ಅತ್ಯಂತ ಖಂಡನೀಯ. ಇದು ಉಡುಪಿಯಲ್ಲಿ ಶಾಂತಿ ಸುವ್ಯವಸ್ಥೆ ಹಾಗು ಸೌಹಾರ್ದತೆಯನ್ನು ಹಾಳು ಮಾಡಿ ಜಿಲ್ಲೆಗೆ ಹಾಗೂ ಇಡೀ ರಾಜ್ಯಕ್ಕೆ ಕೆಟ್ಟ ಹೆಸರು ತರಲು ನಡೆಸುತ್ತಿರುವ ಷಡ್ಯಂತ್ರ. ಪೋಲೀಸರ ವಿಚಾರಣೆ ಹಾಗೂ ಕಾಲೇಜು ಆಡಳಿತ ಮಂಡಳಿಯವರ ಪತ್ರಿಕಾಗೋಷ್ಠಿ ಸ್ಪಷ್ಟವಾಗಿ ಎಲ್ಲ ವಿಷಯಗಳನ್ನು ಮುಂದಿಟ್ಟ ಬಳಿಕವೂ ಒಂದು ಸಮುದಾಯದ ವಿರುದ್ಧ ಆಧಾರರಹಿತ ಸುಳ್ಳಾರೋಪ ಮಾಡುತ್ತಿರುವ ಬಿಜೆಪಿ ಹಾಗು ಸಂಘಪರಿವಾರದ ಮುಖಂಡರ ವಿರುದ್ಧ ಉಡುಪಿ ಪೊಲೀಸರು ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದರು.
“ಕಾಲೇಜಿನಲ್ಲಿ ನಡೆದಿರುವ ಪ್ರಕರಣ ಎಲ್ಲ ಪೋಷಕರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಸೋಷಿಯಲ್ ಮೀಡಿಯಾ ಹಾಗೂ ರೀಲ್ಸ್‌ಗಳಲ್ಲಿ ಮುಳುಗಿರುವ ಯುವಕ-ಯುವತಿಯರು ಮೋಜಿನಲ್ಲಿ ಇಂತಹ ಹತ್ತು ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅವರಿಗೆ ಸೂಕ್ತ ಎಚ್ಚರಿಕೆ ಹಾಗೀ ಕಾಳಜಿಯ ಕೌನ್ಸೆಲಿಂಗ್ ಅಗತ್ಯವಿದೆ. ಆದರೆಮ ಅವರು ಬಾಲಿಶತನದಿಂದ ಮಾಡಿರುವ ಬೇಜವಾಬ್ದಾರಿ ಕೃತ್ಯಕ್ಕೆ ಇಲ್ಲದ ಷಡ್ಯಂತ್ರದ ರೂಪ ಕಟ್ಟುವುದು, ಅವರನ್ನು ಹಾಗೂ ಅವರು ಪ್ರತಿನಿಧಿಸುವ ಸಮುದಾಯವನ್ನು ಬಲಿಪಶು ಮಾಡುವ ಹುನ್ನಾರ ಸರಿಯಲ್ಲ” ಎಂದು ಅವರು ಹೇಳಿದ್ದಾರೆ.