ಇತ್ತೀಚಿಗೆ ಉಡುಪಿಯ ನೇಜಾರಿನಲ್ಲಿ ನಡೆಸ ನಾಲ್ವರ ಭೀಕರ ಹತ್ಯೆಗೆ ಸಂಬಂಧಿಸಿದಂತೆ, ಇಂದು (ನ.29) ಮುಸ್ಲಿಮ್ ಬಾಂಧವ್ಯ ವೇದಿಕೆ ತಂಡ ನೇಜಾರು ಹತ್ಯಾಕಾಂಡ ಪ್ರಕರಣವನ್ನು ತ್ವರಿತವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಕಾನೂನು ಸಚಿವರಿಗೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿಯವರ ಮೂಲಕ ಮನವಿ ಸಲ್ಲಿಸಿದರು.
ಜೊತೆಗೆ ಉಡುಪಿ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ರವರನ್ನು ಭೇಟಿಯಾಗಿ ನೇಜಾರು ಹತ್ಯಾಕಾಂಡ ಪ್ರಕರಣದಲ್ಲಿ ಹಂತಕನನ್ನು ಶೀಘ್ರ ಬಂಧಿಸಿದ್ದಕ್ಕಾಗಿ ಪ್ರಶಂಸನಾ ಪತ್ರ ನೀಡಿದರು. ನಂತರ ಹೈಕಾಡಿಯಲ್ಲಿರಯವ ಸಂತ್ರಸ್ತ ನೂರ್ ಮುಹಮ್ಮದ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಮ್ ಬಾಂಧವ್ಯ ವೇದಿಕೆ ರಾಜ್ಯ ಉಪಾಧ್ಯಕ್ಷ ಎಸ್.ಬಿ. ದಾರಿಮಿ, ನೇಜಾರಿನ ನಾಲ್ವರ ಹತ್ಯೆ ಪ್ರಕರಣ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಇಂತಹ ಪ್ರಕರಣಗಳು ಮರುಕಳಿಸದಿರುವಂತೆ ಆರೋಪಿಗೆ ಶೀಘ್ರವಾಗಿ ಶಿಕ್ಷೆ ಕೊಡುವಂತೆ ಮತ್ತು ತ್ವರಿತಗತಿಯಲ್ಲಿ ವಿಚಾರಣೆ ಮುಗಿಸುಂತೆ ಜಿಲ್ಲಾಧಿಕಾರಿ ಮುಖಾಂತರ ಕಾನೂನು ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಕುಟುಂಬದ ಸದಸ್ಯರಿಗೆ ದೇವನ ಸಹನೆಯನ್ನು ದಯಾಪಾಲಿಸಲಿ ಎಂದ ಅವರು ಮೃತರಿಗಾಗಿ ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.
ಈ ವೇಳೆ ಮೌಲಾನ ಶೇಕ್ ಮುಹಮ್ಮದ್ ಇರ್ಫಾನಿ, ಮೌಲಾನ ಹುಸೇನ್ ದಾರಿಮಿ ಮತ್ತು ಮುಷ್ತಾಕ್ ಹೊನ್ನಾಬೈಲ್ ಸಾಂದರ್ಭಿಕವಾಗಿ ಮಾತನಾಡಿದರು. ಮುಸ್ಲಿಮ್ ಬಾಂಧವ್ಯ ವೇದಿಕೆಯ ಅಸ್ಲಮ್ ಹೈಕಾಡಿ, ಶೇಕ್ ನಝೀರ್ ಬೆಳ್ವೆ, ಇಬ್ರಾಹಿಂ ಕೊಟ, ಮೌಲಾನ ರಶೀದ್ ಮುಂತಾದವರು ಉಪಸ್ಥಿತರಿದ್ದರು.