ಉಡುಪಿ ನಗರದ ಉಪ್ಪೂರಿನಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಬಾಲಕನನ್ನು ರಕ್ಷಿಸಿರುವ ಘಟನೆಯು ಬುಧವಾರ ರಾತ್ರಿ ನಡೆದಿದೆ. ರಕ್ಷಿಸಲ್ಪಟ್ಟ ಬಾಲಕ 9 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಅಂಕ ಗಳಿಕೆಯಲ್ಲಿ ಹಿಂದಿದ್ದರಿಂದ ಪೋಷಕರಾಗಿರುವ ಚಿಕ್ಕಪ್ಪ, ಚಿಕ್ಕಮ್ಮ ಮನೆಯಿಂದ ಹೊರದಬ್ಬಿದರೆಂದು ಬಾಲಕ ಹೇಳಿಕೊಂಡಿದ್ದಾನೆ. ಬಾಲಕನ ಹೆಸರು ಸಮರ್ಥ್ (14) ವಿಜಯಪುರ ಜಿಲ್ಲೆಯವನೆಂದು, ಪ್ರಸ್ತುತ ಲಕ್ಷ್ಮೀನಗರದಲ್ಲಿ ವಾಸವಾಗಿದ್ದನೆಂದು ತಿಳಿದುಬಂದಿದೆ. ಕಾರ್ಯಚರಣೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು, ಜಯಕರ್ ಯು, ಸುಧೀರ್ ಸನಿಲ್, ಅಶೋಕ್ ಅಮೀನ್, ಸುಧೀರ್ ಮೆಂಡನ್, ಸಂಜಯ್ ಯು, ಮನ್ಸೂರ್ ಸಾಸ್ತಾನ ಭಾಗಿಯಾಗಿದ್ದರು.
ಘಟನೆಯ ಹಿನ್ನೆಲೆ
ಉಡುಪಿಯಿಂದ ಸಾಸ್ತಾನಕ್ಕೆ ಬೈಕಿನಲ್ಲಿ ಸಾಗುತ್ತಿದ್ದ ಮನ್ಸೂರು ಎನ್ನುವರಿಗೆ, ಉಪ್ಪೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಾಲಕ ಕಂಡುಬಂದಿದ್ದಾನೆ. ಅವರು ವಿಚಾರಿಸಿದಾಗ ಬಾಲಕ ಅಸಹಾಯಕ ಸ್ಥಿತಿಯನ್ನು ಹೇಳಿಕೊಂಡಿದ್ದಾನೆ. ತಕ್ಷಣ ಮನ್ಸೂರ್ ಅವರು ಬಾಲಕನ ರಕ್ಷಣೆಗೈಯಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ಮಣಿಪಾಲದಲ್ಲಿ ಬೇರೊಂದು ಸಾಮಾಜಿಕ ಸೇವೆಯಲ್ಲಿದ್ದ ಒಳಕಾಡುವರು, ಘಟನೆಯ ವಿವರವನ್ನು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಿಗೆ ದೂರವಾಣಿ ಮೂಲಕ ತಿಳಿಸಿದರು. ಬಾಲಕನನ್ನು ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ಪುರ್ನವಸತಿ ಕಲ್ಪಿಸುವಂತೆ ಮಕ್ಕಳ ಕಲ್ಯಾಣ ಸಮಿತಿಯವರು, ಒಳಕಾಡುವರಿಗೆ ಸಲಹೆ ನೀಡಿದರು. ಅದರಂತೆ ಒಳಕಾಡುವರು ಬಾಲಕನನ್ನು ರಕ್ಷಿಸಿ ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ಪುರ್ನವಸತಿ ಕಲ್ಪಿಸಿದರು.
