ಮಹಿಷ ಮಂಡಲವನ್ನಾಳಿದ ದ್ರಾವಿಡ ದೊರೆ ಮಹಿಷಾಸುರ ಮಹಾರಾಜರ ಕುರಿತು ಜನತೆಗೆ ಅರಿವು ಮೂಡಿಸುವ ಅಗತ್ಯವಿದೆ. ಅದಕ್ಕಾಗಿ ಅಕ್ಟೋಬರ್ 15ರಂದು ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಮಹಿಷ ದಸರಾ ಹಾಗೂ ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಕೋಟ್ಯಾನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಪೂರ್ವಾಗ್ರಹ ಪೀಡಿತ ಹಿಂದೂ ಧರ್ಮಾಂಧರು ಮಹಿಷಾಸುರ ಒಬ್ಬ ದುಷ್ಟ, ನೀಚ, ಪ್ರಜಾಕಂಟಕ, ನರಭಕ್ಷಕ ಇತ್ಯಾದಿಯಾಗಿ ಆತನನ್ನು ಒಬ್ಬ ವಿಲನ್ ಎಂಬಂತೆ ಚಿತ್ರಿಸಿರುವುದನ್ನು ಕಾಣುತ್ತೇವೆ. ಆದರೆ ಮಹಿಷಾಸುರ ಈ ದೇಶದ ಅಸುರ ಸಾಮ್ರಾಜ್ಯದ ನಾಯಕರಲ್ಲಿ ಅಗ್ರಗಣ್ಯನಾಗಿದ್ದವರು. ಆರ್ಯ ಮತ್ತು ಬುದ್ಧಪೂರ್ವ ಪ್ರಾಗೈತಿಹಾಸ ಯುಗದ ಚಕ್ರೇಶ್ವರ, ಮೈಸೂರಿನ ಹುಟ್ಟಿಗೆ ಕಾರಣನಾದವರು. ಪ್ರಾಚೀನ ಮಹಿಷಾಮಂಡಲದ ದೊರೆಯಾಗಿದ್ದವರು” ಎಂದರು.
“ಬಹುಜನರ ಭಾಗ್ಯವಿಧಾತ, ಬೌದ್ಧರ ನೈಜ ಇತಿಹಾಸವನ್ನು, ಮಹಿಷ ಪರಂಪರೆಯನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಮತ್ತು ವೈದಕ ಸಂಸ್ಕೃತಿಗೆ ಪರ್ಯಾಯವಾಗಿ ಪ್ರತಿಸಂಸ್ಕೃತಿ ಸೃಷ್ಟಿಸುವ ಸಲುವಾಗಿ ಅಂಬೇಡ್ಕರ್ ಯುವ ಸೇನೆ ಆಯೋಜಿಸಿರುವ ಮಹಿಷ ದಸರಾ ಸಾರ್ವಕಾಲಿಕ ಮಹತ್ವ ಹೊಂದಲಿದೆ” ಎಂದು ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ತಿಳಿಸಿದರು.
“ಅ.15ರಂದು ಬೆಳಗ್ಗೆ 10:30ಕ್ಕೆ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದಿಂದ ವಿವಿಧ ವಾಹನಗಳ ಜಾಥಾದೊಂದಿಗೆ ಮಹಿಷ ರಾಜನ ಟ್ಯಾಬ್ಲೊ ಮೆರವಣಿಗೆ ಹೊರಟು ಜೋಡುಮಾರ್ಗವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿದೆ. ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಯುವ ಸೇನೆಯ ದಯಾನಂದ ಕಪ್ಪಟ್ಟು, ಲೋಕೇಶ್ ಪಡುಬಿದ್ರಿ, ಸಂಜೀವ ಬಳ್ಳೂರು, ಗಣೇಶ ನೆರ್ಗಿ ಉಪಸ್ಥಿತರಿದ್ದರು.