ಹೊಸ ವರ್ಷದ ಆರಂಭದ ದಿನದಂದೇ ಗ್ರಾಮ ಪಂಚಾಯತಿ ಕಚೇರಿಯ ಸಿಬ್ಬಂದಿಗಳು ಸಾಮೂಹಿಕ ರಾಜೀನಾಮೆ ನೀಡಿರುವ ಘಟನೆ ಉಡುಪಿ ಜಿಲ್ಲೆಯ ಬೈರಂಪಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಪಂಚಾಯತಿಯ ಸದಸ್ಯ ಸಂತೋಷ್ ಮತ್ತು ಪಿಡಿಒ ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ಸಿಬ್ಬಂದಿಗಳು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಜನವರಿ 1ರ ಬುಧವಾರ ಗ್ರಾಮ ಪಂಚಾಯತಿಯನ್ನು ತೆರೆದೆ ಇರಲಿಲ್ಲ. ತಮ್ಮ ಕೆಲಸ, ಕಾರ್ಯಗಳಿಗಾಗಿ ಪಂಚಾಯತಿಗೆ ಬಂದಿದ್ದ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಕಚೇರಿಗೆ ಬೀಗ ಹಾಕಿರುವುದನ್ನು ಕಂಡು ಬೆರಗಾಗಿದ್ದಾರೆ. ಕಚೇರಿ ತೆರೆಯದೇ ಇದ್ದಿದ್ದರಿಂದ ತಮ್ಮ ಕೆಲಸಗಳಾಗದೆ ಪರದಾಡಿದ್ದಾರೆ.
ಪಂಚಾಯತಿ ಸದಸ್ಯ ಸಂತೋಷ್ ಮತ್ತು ಪಿಡಿಒ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಚೇರಿಯ ಸಿಬ್ಬಂದಿಗಳು ಈ ಹಿಂದೆಯೇ ಆರೋಪಿಸಿದ್ದರು. ಪಂಚಾಯತಿ ಅಧ್ಯಕ್ಷರಿಗೆ ದೂರನ್ನೂ ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಂತೋಷ್ ಮತ್ತು ಪಿಡಿಒ ಉಪಟಳ ಮುಂದುವರೆದಿತ್ತು. ಹೀಗಾಗಿ, ಬೇಸತ್ತ ಸಿಬ್ಬಂದಿಗಳು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಬೈರಂಪಳ್ಳಿ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಸುಮನಾ, ಡಿಇಒ ವಾಸಂತಿ, ಜಲಗಾರ ಮನೋಹರ್ ರಾಜೀನಾಮೆ ನೀಡಿದ್ದಾರೆ. ಪಂಚಾಯತಿ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ಪಂಚಾಯತಿ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ತಾವು ಎದುರಿಸುತ್ತಿರುವ ಮಾನಸಿಕ ನೋವು, ಸಂಕಟ, ಒತ್ತಡಗಳ ಬಗ್ಗೆ ವಿವರಿಸಿದ್ದು, ತಮ್ಮ ಭವಿಷ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡಿರುವುದಾಗಿ ವಿವರಿಸಿದ್ದಾರೆ.
ಈ ವರದಿ ಓದಿದ್ದೀರಾ?: ಡೆಲ್ಲಿ ಪತ್ರಿಕೆಯಲ್ಲಿ ಮಂಡ್ಯದ ‘ಬಾಡೂಟ ಆಂದೋಲನ’ದ ಸದ್ದು-ಸುದ್ದಿ!
ಜನವರಿ 1ರಂದು ಗ್ರಾಮ ಪಂಚಾಯತಿಗೆ ಬೀಗ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಡುಪಿ ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಂಚಾಯತಿಗೆ ಭೇಟಿ ನೀಡಿದ್ದು, ಪಂಚಾಯತಿಯ ಬಾಗಿಲು ತೆರೆಸಿದ್ದಾರೆ. ಆದರೆ, ರಾಜೀನಾಮೆ ನೀಡಿರುವ ಸಿಬ್ಬಂದಿಗಳು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಸಮಸ್ಯೆಯನ್ನು ಜಿಲ್ಲಾಡಳಿತ ಪರಿಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.