ಮಾಧ್ಯಮಗಳು ಕೆಲವೊಂದು ಸೂಕ್ಷ್ಮ ವಿಚಾರ, ವಿವಾದಗಳನ್ನು ವೀಕ್ಷಕರ ಹಾಗೂ ಓದುಗರ ಸಂಖ್ಯೆ ಹೆಚ್ಚು ಮಾಡುವ ಉದ್ದೇಶ ಇಟ್ಟುಕೊಂಡು ಸುದ್ದಿ ಮಾಡಬಾರದು; ಅದರ ಸೂಕ್ಷ್ಮತೆಯನ್ನು ಕಾಪಾಡಿಕೊಂಡು ಸತ್ಯಾಸತ್ಯತೆಯನ್ನು ಅರಿತು ವರದಿ ಮಾಡಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ತಿಳಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಜತ ಮಹೋತ್ಸವ ಸಮಿತಿ, ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ಪ್ರಾಯೋಜಕತ್ವದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಫೋಟೋಗ್ರಫಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
“ಸೂಕ್ಷ್ಮತೆಯಿಂದ ಕೂಡಿದ ಸುದ್ದಿಗಳನ್ನು ಅದರ ನೈಜ್ಯತೆ, ಗಂಭೀರತೆ, ಪ್ರಾಮುಖ್ಯತೆ ಹಾಗೂ ಆಳವನ್ನು ತಿಳಿದು ಜನರ ಮುಂದೆ ಇಟ್ಟಾಗ ಮಾತ್ರ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯ” ಎಂದರು.
“ಸಾಮಾಜಿಕ ಜಾಲತಾಣಗಳಿಗೆ ಗಡಿ ಎಂಬುದು ಇಲ್ಲ. ಅಲ್ಲಿ ಯಾರು ಏನು ಬೇಕಾದರೂ ಬರೆಯಬಹುದು. ಅದರಲ್ಲಿ ಸತ್ಯ, ಸುಳ್ಳು, ವದಂತಿ ಎಲ್ಲವೂ ಇರುತ್ತದೆ. ಕೆಲವು ಜನರಿಗೆ ಕೆಲವು ವಿಷಯಗಳ ಬಗ್ಗೆ ಏನು ತಿಳಿದಿಲ್ಲದಿದ್ದರೂ ಅದರ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಇದರಿಂದ ಸಮಾಜ ಮತ್ತು ಮಾನವೀಯತೆಗೆ ತುಂಬಾ ಹಾನಿಯಾಗುತ್ತದೆ. ಇದು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಇರುವ ವ್ಯತ್ಯಾಸವಾಗಿದೆ. ಅದನ್ನು ಉಳಿಸಬೇಕಾದರೆ ಸತ್ಯವನ್ನು ಅರಿತು ಸುದ್ದಿ ಮಾಡಬೇಕು” ಎಂದು ತಿಳಿಸಿದರು.

“ಒಂದು ಫೋಟೋ ಸಾವಿರ ಶಬ್ದಗಳಿಗೆ ಸಮಾನವಾಗಿರುತ್ತದೆ. ಉತ್ತಮ ಫೋಟೋ ಅಂದರೆ ಕೇವಲ ತಂತ್ರಜ್ಞಾನ, ಕಲೆ ಮಾತ್ರ ಅಲ್ಲ. ಅದರಲ್ಲಿ ಛಾಯಾ ಚಿತ್ರಗ್ರಾಹಕನ ಫಿಲಾಸಫಿ ಕೂಡ ಮುಖ್ಯವಾಗಿರುತ್ತದೆ. ಎಲ್ಲ ವಿಚಾರಗಳನ್ನು ತಿಳಿದಿರುವ, ಎಲ್ಲ ದೃಷ್ಠಿಕೋನದಲ್ಲಿ ಆಲೋಚನೆ ಮಾಡುವ, ಜನರಪ ಕಾಳಜಿ ಹೊಂದಿರುವ ಮತ್ತು ಸಕಾರಾತ್ಮಕವಾಗಿ ವಿಮರ್ಶೆ ಮಾಡುವಂತಹ ಶಕ್ತಿ ಇರುವ ವೃತ್ತಿ ಎಂದರೆ ಅದು ಪತ್ರಿಕೋದ್ಯಮ” ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಸುಭಾಷ್ ಚಂದ್ರ ವಾಗ್ಳೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಉಡುಪಿ ಅಜ್ಜರಕಾಡು ಮಹಿಳಾ ಪ್ರಥಮ ದರ್ಜೆ ಕಾಲೇಜು, ಉಡುಪಿ ಎಂಜಿಎಂ ಕಾಲೇಜು, ಕಾರ್ಕಳ ಎಂಪಿಎಂ ಕಾಲೇಜು ಮತ್ತು ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗಮನ ಸೆಳೆದ ಹಳೆ ಕ್ಯಾಮೆರಾ- ಛಾಯಾಚಿತ್ರ ಪ್ರದರ್ಶನ
ಕಾರ್ಯಾಗಾರದಲ್ಲಿ ಏರ್ಪಡಿಸಲಾಗಿದ್ದ ಹಳೆಯ ಕ್ಯಾಮೆರಾಗಳು ಹಾಗೂ ಛಾಯಾಚಿತ್ರ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಪತ್ರಕರ್ತ ಜಯಕರ ಸುವರ್ಣ ಹಾಗೂ ಪ್ರಮೋದ್ ಸುವರ್ಣ ತಮ್ಮ ಸಂಗ್ರಹದಲ್ಲಿದ್ದ 40 ವರ್ಷಗಳ ಹಿಂದಿನ ಫೀಲ್ಡ್ ಕ್ಯಾಮೆರಾ, ಅದೇ ರೀತಿ ಹಳೆಯ ಟ್ವಿನ್ ಲೆನ್ಸ್ ರಿಫ್ಲೆಕ್ಸ್ ಕ್ಯಾಮೆರಾ, ಡಿಜಿಟಲ್ ಕ್ಯಾಮೆರಾ, ವಿಎಚ್‌ಎಸ್ ಹಾಗೂ ಮಿನಿ ಡಿವಿ ವಿಡಿಯೋ ಕ್ಯಾಮೆರಾಗಳು, ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಪ್ರದರ್ಶಿಸಿದರು.
ಸಂಘದ ಸದಸ್ಯರಾದ ಅಸ್ಟ್ರೋ ಮೋಹನ್, ಜನಾರ್ದನ ಕೊಡವೂರು, ಸುಭಾಷ್‌ಚಂದ್ರ ವಾಗ್ಳೆ, ಅರುಣಾಚಲ್ ಹೆಬ್ಬಾರ್, ನಝೀರ್ ಪೊಲ್ಯ, ಉಮೇಶ್ ಮಾರ್ಪಳ್ಳಿ, ರಾಮ ಅಜೆಕಾರು, ಹರೀಶ್ ಕಟಪಾಡಿ, ಅಶ್ವತ್ಥ್ ಆಚಾರ್ಯ ತೆಗೆದ ವಿವಿಧ ರೀತಿಯ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಧರೆಗುರಳಿತು ಡಿಆರ್‌ಡಿಒ ತಯಾರಿಸಿದ ಚಾಲಕ ರಹಿತ ಡ್ರೋನ್!
ಫೋಟೋಗ್ರಫಿ ಕಾರ್ಯಾಗಾರವನ್ನು ಉದಯವಾಣಿಯ ಛಾಯಾಚಿತ್ರ ಪತ್ರಕರ್ತ ಅಸ್ಟ್ರೋ ಮೋಹನ್, ನುಡಿಚಿತ್ರ ಕಾರ್ಯಾಗಾರವನ್ನು ಮಂಗಳೂರು ವಿಜಯ ಕರ್ನಾಟಕ ಹಿರಿಯ ಉಪಸಂಪಾದಕ ಸುಶೀಲೇಂದ್ರ ಕುಡುಪಾಡಿ ನಡೆಸಿಕೊಟ್ಟರು. ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಉಡುಪಿ ಪತ್ರಿಕಾ ಭವನ ಸಮಿತಿ ಸಂಚಾಲಕ ಅಜಿತ್ ಆರಾಡಿ ಇದ್ದರು.