ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದ ಸಂದರ್ಭದಲ್ಲಿ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಇಂದು ಉಡುಪಿಯ ಮಣಿಪಾಲದ ಬಳಿ ನಡೆದಿದೆ.
ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಳೆದ ಜೂನ್ 08 ರಂದು ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಂಜೆ ಆರೋಪಿತನಾದ ಮೊಹಮ್ಮದ್ ದಾನೀಶ್ (29) ಎಂಬವವನ್ನು ಪೊಲೀಸರು ದಸ್ತಗಿರಿ ಮಾಡಿದ್ದರು. ಆತನನ್ನು ತನಿಖೆಗೆ ಒಳಪಡಿಸಿ ಇಂದು ತನಿಖೆಯ ಬಗ್ಗೆ ಉಡುಪಿ ಬಡಗುಬೆಟ್ಟು ಗ್ರಾಮದ ಮಣಿಪಾಲ, ತಾಂಗೋಡು 2ನೇ ಕ್ರಾಸ್ ಹಾಡಿ ಬಳಿಯಲ್ಲಿ ಕೃತ್ಯವೆಸಗಿದ ಸ್ಥಳವನ್ನು ಪಂಚನಾಮೆಯನ್ನು ಮಾಡುವ ಸಮಯದಲ್ಲಿ ಆರೋಪಿ ಮೊಹಮ್ಮದ್ ದ್ಯಾನೀಶ್ ಆತನಿಗೆ ಕೈಕೊಳ ಹಿಡಿದುಕೊಂಡಿದ್ದ ಪಿಸಿ ರಿತೇಶ್ ರವರ ಎದೆಗೆ ಎರಡೂ ಕೈಗಳಿಂದ ಗುದ್ದಿ ದೂಡಿ ನೆಲಕ್ಕೆ ಬೀಳಿಸಿ ಅಲ್ಲಿಯೇ ಇದ್ದ ಲ್ಯಾಟ್ರೇಟ್ ಸೈಜ್ ನ ಕಲ್ಲನ್ನು ಪಿಸಿ ರಿತೇಶ್ ರವರ ಮೇಲೆ ಎತ್ತಿಹಾಕಲು ಬಂದಿದ್ದಾನೆ. ಆಗ ಪೊಲೀಸ್ ನಿರೀಕ್ಷಕರರಾದ ರಾಮಚಂದ್ರ ನಾಯಕ್ ತಡೆದಾಗ ಅವರ ಮೇಲು ಎಸೆಯಲು ಪ್ರಯತ್ನಿಸಿದ್ದಾನೆ. ಆ ಸಮಯ ಲಾಠಿಯಿಂದ ಆತನ ಕಾಲಿಗೆ ಹೊಡೆದು, ಅವನನ್ನು ನಿಯಂತ್ರಿಸಿದ್ದು, ಉಳಿದ ಪೊಲೀಸ್ ಸಿಬ್ಬಂದಿಗಳು ಆತನನ್ನು ಹಿಡಿದಿದ್ದಾರೆ.

ಈ ಪ್ರಕರಣದಲ್ಲಿ ಗಾಯಗೊಂಡ ಸಿಬ್ಬಂದಿ ಪಿಸಿ ರಿತೇಶ್ ಹಾಗೂ ಆರೋಪಿ ಮೊಹಮ್ಮದ್ ಡಾನೀಶ್ ರವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.