ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ಘಟಕವು ಉಡುಪಿಯಲ್ಲಿ ‘ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್(ಸ)’ ಎಂಬ ಶೀರ್ಷಿಕೆಯಡಿ ಪ್ರವಾದಿ ಪರಿಚಯ ಅಭಿಯಾನವನ್ನು ಹಮ್ಮಿಕೊಂಡಿತ್ತು.
ನಮ್ಮ ದೇಶ ಹಲವಾರು ಧರ್ಮ, ನಂಬಿಕೆ, ಭಾಷೆ, ಸಂಸ್ಕೃತಿ, ಆಚರಣೆಗಳು, ವೈವಿಧ್ಯಮಯ ಆಚಾರ-ವಿಚಾರಗಳಿಂದ ಸಮೃದ್ಧವಾಗಿದೆ. ಸಹೋದರ ಸಮುದಾಯಗಳ ಧಾರ್ಮಿಕ ಚಿಂತನೆ, ಮೌಲ್ಯಗಳನ್ನು ಪರಸ್ಪರ ಅರಿತುಕೊಂಡು ಬಾಳಿದರೆ ಜಗತ್ತಿಗೆ ಮಾದರಿ ದೇಶವಾಗಬಹುದು ಈ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ತಿಳಿಸಿದೆ.
ಈ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ಪುಸ್ತಕ ಬಿಡುಗಡೆ, ಸಾರ್ವಜನಿಕ ಸಭೆ, ರಕ್ತದಾನ ಶಿಬಿರ, ಸ್ವಚ್ಚತಾ ಅಭಿಯಾನ, ರೋಗಿಗಳ ಸಂದರ್ಶನ ನಡೆಸಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಅಗತ್ಯ ವಸ್ತ್ರಗಳ ವಿತರಣೆ, ಅನಾಥಾಲಯ ಭೇಟಿ, ವೃದ್ಧಾಶ್ರಮ ಬೇಟಿ ಹೀಗೆ ಹತ್ತು-ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹಮ್ಮಿಕೊಳ್ಳಲಾಗಿದ್ದ ಈ ಸರಣಿ ಕಾರ್ಯಕ್ರಮದಂತೆ ಅನೇಕ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಇದರ ಮುಂದುವರಿದ ಭಾಗವಾಗಿ ಉಡುಪಿ ಜಿಲ್ಲೆಯ ಶಿಕ್ಷಕ ವೃಂದದವರಿಗಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯು ಅಭಿಯಾನದ ಶೀರ್ಷಿಕೆಯಡಿಯಲ್ಲಿಯೇ ನಡೆಸಲು ಉದ್ದೇಶಿಸಲಾಗಿದ್ದು, ಪ್ರಬಂಧ ಸ್ಪರ್ಧೆಯ ಶೀರ್ಷಿಕೆ, ʼಸಮಾನತೆಯ ಸಮಾಜದ ಶಿಲ್ಪಿ – ಪ್ರವಾದಿ ಮುಹಮ್ಮದ್(ಸ).ʼ ಎಂದಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 20,000 ರೂ. ದ್ವಿತೀಯ ಬಹುಮಾನ 15,000 ರೂ. ಹಾಗೂ ತೃತೀಯ ಬಹುಮಾನ 10,000 ಇದ್ದು, ಎರಡು ಸಾವಿರದಂತೆ ಹತ್ತು ಪ್ರಬಂಧಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಜೊತೆಗೆ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುತ್ತದೆ. ಶಾಲಾ-ಕಾಲೇಜುಗಳಿಗೆ ಮಧ್ಯಾವಧಿ ರಜಾ ದಿನಗಳಾಗಿದ್ದುದರಿಂದ, ಶಿಕ್ಷಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಲ್ಲಿ ಪ್ರಬಂಧ ರವಾನಿಸಲು ಇದ್ದಂತಹ ಕೊನೆಯ ದಿನಾಂಕ 30-10-2023ವನ್ನು ಮುಂದೂಡಲು ತೀರ್ಮಾನಿಸಿ, ಪ್ರಬಂಧ ರವಾನಿಸಲು ಕೊನೆಯ ದಿನಾಂಕ 15.11.2023 ಮುಂದೂಡಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಪ್ರಕಟಣೆಯಲ್ಲಿ ತಿಳಿಸಿದೆ.