ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧಿಕಾರಿಗಳು ಭ್ರಷ್ಟಚಾರ ಮತ್ತು ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿ ಉಡುಪಿಯ ಎಪಿಎಂಸಿ ಆಡಳಿತಾಧಿಕಾರಿ ಕಚೇರಿ ಎದುರು ವರ್ತಕರು ಪ್ರತಿಭಟನೆ ನಡೆಸಿದ್ದಾರೆ. ಆಡಳಿತಾಧಿಕಾರಿ ಮಹದೇವ ಈಸಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
“ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು 20-25 ವರ್ಷಗಳಿಂದ ಇಲ್ಲಿಯ ವರ್ತಕರು ವ್ಯಾಪಾರವನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ಇಲ್ಲಿಯ ಅಧಿಕಾರಿಗಳು ಇಲ್ಲಿನ ಜಾಗವನ್ನು ಅತಿ ಕಡಿಮೆ ಬೆಲೆಗೆ (ಚ.ಅಡಿ.376%) ಮಾರಾಟ ಮಾಡಿದ್ದಾರೆ. ಇಲ್ಲಿ ಚದರ ಅಡಿಗೆ ₹2,000ದಂತೆ ಮಾರುಕಟ್ಟೆ ದರ ಇದೆ. ಆದರೆ, ಈ ಜಾಗದ ವ್ಯವಹಾರದಲ್ಲಿ ತುಂಬಾ ಲೋಪದೋಷವಿದ್ದು, ದೊಡ್ಡ ಭ್ರಷ್ಟಚಾರ ನಡೆದಿದೆ” ಎಂದು ವರ್ತಕರು ಆರೋಪಿಸಿದ್ದಾರೆ.
“ಚಿಲ್ಲರೆ ವರ್ತಕರಿಗೆ ₹250 ಪರವಾನಗಿ ಶುಲ್ಕವಿದೆ. ಆದರೆ, ಅಧಿಕಾರಿಗಳು ₹2,850ನಂತೆ ಪರವಾನಗಿ ಶುಲ್ಕ ತೆಗೆದುಕೊಂಡಿರುತ್ತಾರೆ. ರಖಂ ವ್ಯಾಪಾರಸ್ಥರಿಗೆ ₹10,000ದಿಂದ ₹20,000 ಲಂಚ ಪಡೆದಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಟ್ಕಾ ದಂಧೆ ನಿಯಂತ್ರಿಸಲು ಕರವೇ ಒತ್ತಾಯ
“ಆದಿ ಉಡುಪಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಇರುವುದಿಲ್ಲ. ಮುಖ್ಯ ರಸ್ತೆ ಹಾಳಾಗಿದೆ. ಶೌಚಾಲಯ ದುರ್ನಾತ ಬೀರುತ್ತದೆ. ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಮಾರುಕಟ್ಟೆಯು ಸ್ವಚ್ಛವಾಗುತ್ತಿಲ್ಲ. ವಿದ್ಯುತ್ ವ್ಯವಸ್ಥೆಯು ಸಮರ್ಪಕವಾಗಿಲ್ಲ” ಎಂದು ನೊಂದ ವರ್ತಕರು ದೂರಿದ್ದಾರೆ.
“ಉಡುಪಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುವ ಅವ್ಯವಹಾರವನ್ನು ಬಯಲಿಗೆಳೆದು ನೊಂದ ವರ್ತಕರಿಗೆ ನ್ಯಾಯ ಒದಗಿಸಬೇಕು” ಎಂದು ಮನವಿ ಮಾಡಿದ್ದಾರೆ.