ಉಡುಪಿಯಲ್ಲಿ ಪ್ರವೀಣ್ ಅರುಣ್ ಚೌಗಲೆ ಎಂಬಾತ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯ ಬಳಿಕ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಯ ಸಂಬಂಧ ಉಡುಪಿ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
’15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ’ ಎಂದವನ ಮೇಲೆ ಎಫ್‌ಐಆರ್
ಪ್ರವೀಣ್ ಅರುಣ್ ಚೌಗಲೆಯ ದುಷ್ಕೃತ್ಯವನ್ನು ವಿರೋಧಿಸುವುದರ ಬದಲು ಹಂತಕನ ಫೋಟೋಗೆ ಕಿರೀಟ ಇಟ್ಟು, ಇನ್ಸಾಗ್ರಾಮ್‌ನಲ್ಲಿ ‘ಇದು ವಿಶ್ವ ದಾಖಲೆ’ ಎಂದು ಸ್ಟೋರಿ ಹಾಕಿದ್ದ ವ್ಯಕ್ತಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹಿಂದೂ ಮಂತ್ರ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂತಕ ಪ್ರವೀಣ್ ಅರುಣ್ ಚೌಗಲೆಯ ಫೋಟೋ ಹಾಕಿ, ಆತನಿಗೆ ಕಿರೀಟ ಇಟ್ಟು, ’15 ನಿಮಿಷದಲ್ಲಿ 4 ಕೊಲೆ, ಇದು ವರ್ಲ್ಡ್ ರೆಕಾರ್ಡ್’ ಎಂದು ಬರೆದು ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದಾನೆ.
ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳ ಕುರಿತು ‘ಹಿಂದೂ_ಮಂತ್ರ_’ ಎಂಬ ಇನ್‌ಸ್ಟಾಗ್ರಾಮ್ ಪುಟದ ವಿರುದ್ಧ ಉಡುಪಿಯ ಸೆನ್ ಪೊಲೀಸರು ನವೆಂಬರ್ 16 ರಂದು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ.
‘Hindu_Mantra_’ ಎಂಬ ಇನ್‌ಸ್ಟಾಗ್ರಾಮ್ ಪುಟವು ಈ ಬಗ್ಗೆ “15 ನಿಮಿಷಗಳಲ್ಲಿ 4 ಮುಸ್ಲಿಮರನ್ನು ಕೊಂದು ವಿಶ್ವದಾಖಲೆ ಮಾಡಿದ್ದಾನೆ” ಎಂಬ ಶೀರ್ಷಿಕೆಯೊಂದಿಗೆ ಅವಹೇಳನಕಾರಿ ಪೋಸ್ಟ್ ಮಾಡಿತ್ತು. ಅಲ್ಲದೆ, ಆರೋಪಿ ಪ್ರವೀಣ್ ಚೌಗಲೆ ಅವರ ಫೋಟೋವನ್ನು ಕಿರೀಟ ಧರಿಸಿ ಪೋಸ್ಟ್ ಆಗಿತ್ತು. ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಕಿಡಿಗೇಡಿಗಳು ಉಡುಪಿಯ ಹೆಣ್ಣುಮಕ್ಕಳ ವಿಚಾರಕ್ಕೆ ಯಾರೂ ಬಂದಿಲ್ಲ ಹಾಗಾಗಿ ನಾವೂ ಈ ವಿಚಾರಕ್ಕೆ ಬರುವುದಿಲ್ಲ ಎಂದು ಬರೆದುಕೊಳ್ಳಲಾಗಿತ್ತು. ಪೇಜ್ ವಿವಿಧ ಮುಸ್ಲಿಂ ವಿರೋಧಿ ಹೇಳಿಕೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ಹಂಚಿಕೊಂಡಿದೆ.

ಈ ವಿಚಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಅವರ ಗಮನಕ್ಕೆ ಬಂದಾಗ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಮಹಜರು ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಘಟನೆ: ಎಫ್ಐಆರ್
ಉಡುಪಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಪ್ರವೀಣ್ ಅರುಣ್ ಚೌಗಲೆ(39)ಯನ್ನು ನ್ಯಾಯಾಲಯವು ನ.28ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಉಡುಪಿ ಪೊಲೀಸರು ಕೊಲೆ ನಡೆದ ಸ್ಥಳಕ್ಕೆ ಗುರುವಾರ(ನ.16) ಮಹಜರಿಗೆ ಕರೆತರಲಾಗಿತ್ತು. ಈ ಮಾಹಿತಿಯನ್ನರಿತ ಸ್ಥಳೀಯರು ಗುಂಪು ಸೇರಿ, ಆರೋಪಿಯನ್ನು ಗಲ್ಲಿಗೇರಿಸಿ, ಆತನಿಗೆ ಬದುಕುವ ಹಕ್ಕಿಲ್ಲ ಎಂದು ಪ್ರತಿಭಟನೆ ನಡೆಸಿದ್ದಲ್ಲದೇ, ಆತನ ಮೇಲೆ ದಾಳಿಗೂ ಯತ್ನಿಸಿದ್ದರು.
ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದರಿಂದ ಪರಿಸ್ಥಿತಿ ಕೈ ಮೀರುವುದನ್ನು ಅರಿತ ಸ್ಥಳದಲ್ಲಿದ್ದ ಪೊಲೀಸರು, ಲಘು ಲಾಠಿ ಚಾರ್ಜ್ ನಡೆಸಿ ಆಕ್ರೋಶಿತ ಗುಂಪನ್ನು ಚದುರಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಜರು ಪ್ರಕ್ರಿಯೆ ನಡೆಸುವ ವೇಳೆ ನಡೆದ ಘಟನೆಗೆ ಸಂಬಂಧಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ಕೂಡ ದಾಖಲಿಸಲಾಗಿದೆ.
ಉಡುಪಿ ಕೊಲೆ ಪ್ರಕರಣ: ಆರೋಪಿಯ ಮಹಜರಿನ ವೇಳೆ ಜನರ ಆಕ್ರೋಶ; ಪೊಲೀಸರಿಂದ ಲಘು ಲಾಠಿ ಚಾರ್ಜ್
ಆರೋಪಿಯ ಗಲ್ಲಿಗೇರಿಸಲು ಆಗ್ರಹ pic.twitter.com/KAUwfUIDA2
— eedina.com (@eedinanews) November 16, 2023
ಅಕ್ರಮ ಕೂಟ ಸೇರಿ ಗಲಭೆಗೆ ಯತ್ನಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಆರೋಪದ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಐಪಿಸಿ 143, 147, 341, 186, 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನು ಓದಿದ್ದೀರಾ? ಗ್ರಾಮೀಣ ವಿದ್ಯಾರ್ಥಿಗಳಿಗೆ ‘ಕಂಪ್ಯೂಟರ್ ಬಸ್’: ಮಂಗಳೂರಿನ ‘ಎಂ ಫ್ರೆಂಡ್ಸ್’ನಿಂದ ವಿನೂತನ ಪ್ರಯೋಗ
ಕೊಲೆಗೆ ಅಯ್ನಾಝ್ ಮೇಲಿನ ದ್ವೇಷ, ಅಸೂಯೆ ಕಾರಣ: ಉಡುಪಿ ಎಸ್‌ಪಿ
ಭಾನುವಾರ ಬೆಳಗ್ಗೆ ನಡೆದಿದ್ದ ನಾಲ್ವರನ್ನು ಇರಿದು ಕೊಂದ ಘಟನೆಯಲ್ಲಿ ಏರ್ ಇಂಡಿಯಾ ಉದ್ಯೋಗಿಯಾಗಿದ್ದ ಪ್ರವೀಣ್ ಅರುಣ್ ಚೌಗಲೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯಾದ ನಾಲ್ವರ ಪೈಕಿ 21-ವರ್ಷ ವಯಸ್ಸಿನ ಯುವತಿ ಅಯ್ನಾಝ್ ಪ್ರವೀಣ್‌ನ ಸಹೋದ್ಯೋಗಿದ್ದಳು.
ಅಯ್ನಾಝ್‌ಳನ್ನು ಅತಿಯಾಗಿ ಹಚ್ಚಿಕೊಂಡು, ತನ್ನ ನಿಯಂತ್ರಣದಲ್ಲೇ ಇರಬೇಕು ಎಂಬ ಮನಸ್ಥಿತಿ ಹೊಂದಿದ್ದ. ಅಸೂಯೆ ಮತ್ತು ದ್ವೇಷದಿಂದ ಅಯ್ನಾಝ್‌ಳನ್ನು ಕೊಲೆ ಮಾಡಲು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾನೆ. ತನ್ನ ಜೊತೆ ಮಾತ್ರ ಮಾತನಾಡಬೇಕು, ನನ್ನ ಜೊತೆ ಮಾತ್ರ ಬೆರೆಯಬೇಕು ಎಂಬ ನಿಯಮವನ್ನು ಪ್ರವೀಣ್ ಹಾಕುತ್ತಿದ್ದ ಎಂದು ವಿಚಾರಣೆ ವೇಳೆ ಪ್ರವೀಣ್ ಹೇಳಿರುವುದಾಗಿ ಉಡುಪಿ ಎಸ್.ಪಿ ಡಾ. ಅರುಣ್.ಕೆ ಮಾಹಿತಿ ನೀಡಿದ್ದಾರೆ.