ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ವಿತರಣೆ ಮಾಡುವ ಪಡಿತರ ಪಡೆದುಕೊಳ್ಳಲು ಸರ್ವರ್ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ಪರದಾಡುವಂತಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಪ್ ಸೇಲ್ (ಇ-ಪಿಒಎಸ್) ಯಂತ್ರಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್‌ಲೈನ್ ವ್ಯವಸ್ಥೆಗೆ ಇಲಾಖೆ ನೂತನ ಸರ್ವರ್ ಅಳವಡಿಸಿದೆ. ಅದರ ದೋಷದಿಂದಾಗಿ ರಾಜ್ಯಾದ್ಯಂತ ಸಾರ್ವಜನಿಕರ ಪಡಿತರ ವಿತರಣೆ ವ್ಯವಸ್ಥೆ ನಿಧಾನಗತಿಯಲ್ಲಿ ಸಾಗುತ್ತಿದೆ.
ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಮುಂಚಿನ ವ್ಯವಸ್ಥೆಯಂತೆ ಪಡಿತರ ವಿತರಣೆಗೆ ಬಯೋಮೆಟ್ರಿಕ್ ಹಾಗೂ ಮೊಬೈಲ್ ಒಟಿಪಿ ಮೂಲಕ ಗ್ರಾಹಕರಿಗೆ ಪಡಿತರ ವಿತರಣೆ ಆಗುತ್ತಿತ್ತು. ಇದೀಗ ಮೊಬೈಲ್ ಒಟಿಪಿ ಸಂಪೂರ್ಣ ಬಂದ್ ಆಗಿದೆ. ಬಯೋಮೆಟ್ರಿಕ್ ಕಾರ್ಯ ಎನ್‌ಐಸಿಯಿಂದ ನಿರ್ವಹಿಸಲಾಗುತ್ತಿತ್ತು. ಇದೀಗ ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್‌ಗೆ ನೂತನ ಸರ್ವರ್ ಅಳವಡಿಸಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಹೇರೂರು ಗ್ರಾಮದ ಸುದರ್ಶನ್, “ಪ್ರತಿಬಾರಿಯೂ ಈ ಸಮಸ್ಯೆ ತಪ್ಪಿದ್ದಲ್ಲ ಎಲ್ಲಾ ಕೆಲಸ ಕಾರ್ಯ ಬಿಟ್ಟು ಗಂಟೆಗಟ್ಟಲೆ ಕಾಯಲೇಬೇಕು. ಇದಕ್ಕೆ ಪರ್ಯಾಯ ವ್ಯವಸ್ಥೆ ಕೂಡಲೇ ಮಾಡಿದರೆ ಎಲ್ಲರಿಗೂ ಅನುಕೂಲ” ಎಂದು ಹೇಳಿದರು.
ಈ ತಾಂತ್ರಿಕ ತೊಂದರೆಯನ್ನು ಮನಗಂಡು ಉಡುಪಿ ಜಿಲ್ಲಾಡಳಿತವು ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯನ್ನು ಅಕ್ಟೋಬರ್ ತಿಂಗಳಲ್ಲಿ ಕೆ.ಎಸ್.ಡಿ.ಸಿ ಗೆ ಮೈಗ್ರೇಶನ್ ಆಗಿರುವ ಹೊಸ ಸರ್ವರ್ ಮೂಲಕ ವಿತರಣೆ ಮಾಡುವ ಕಾರ್ಯ ಪ್ರಾರಂಭಿಸಿದೆ. ಈ ಸಂಬಂಧ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಪಡಿತರ ಚೀಟಿದಾರರಿಂದ ಹಲವು ದೂರುಗಳು ಕೇಳಿ ಬಂದಿರುತ್ತದೆ. ಪ್ರಸ್ತುತ ಹೊಸ ಸರ್ವರ್ ಅಳವಡಿಸಿರುವುದರಿಂದ ಪ್ರಸಕ್ತ ತಿಂಗಳಲ್ಲಿ ತಡವಾಗಿ (ಅಕ್ಟೋಬರ್ 18 ನೇ ತಾರೀಕಿನಿಂದ) ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡುತ್ತಿದೆ.
ಪ್ರಸಕ್ತ ತಿಂಗಳಲ್ಲಿ ಪಡಿತರ ವಿತರಣೆಯು ವಿಳಂಬವಾಗಿ ಪ್ರಾರಂಭವಾಗಿರುವುದರಿಂದ ಆಹಾರ ಇಲಾಖೆಯ ಆಯುಕ್ತರು ಅಕ್ಟೋಬರ್-2024ರ ಮಾಹೆಗೆ ಮಾತ್ರ ಪಡಿತರ ವಿತರಣೆಯನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ರ ವರೆಗೆ ನಿಗದಿಪಡಿಸಿ ಎಂದು ಈಗಾಗಲೇ ಪ್ರಕಟಣೆಯನ್ನು ಸಹ ಹೊರಡಿಸಿದೆ.
ತಾಂತ್ರಿಕ ಸಮಸ್ಯೆಯಿಂದ ಪಡಿತರ ವಿತರಣೆಯು ವಿಳಂಬವಾಗಿರುವುದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯಲು ತೊಂದರೆಯಾಗುತ್ತಿರುವುದು ಆಹಾರ ಇಲಾಖೆಯ ಆಯುಕ್ತರ ಗಮನಕ್ಕೆ ತಂದಿದ್ದು, ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಹಾಗೂ ಸಾರ್ವಜನಿಕರು ಈ ಬಗ್ಗೆ ಯಾವುದೇ ಆತಂಕ ಪಡುವುದು ಬೇಡ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದಾವಣಗೆರೆ | ಅಕ್ರಮವಾಗಿ ಮರ ಮಾರಾಟ: ಉಪ ಅರಣ್ಯಾಧಿಕಾರಿ, ಗಸ್ತು ಅರಣ್ಯ ರಕ್ಷಕ ಅಮಾನತು
ಅದರ ಜೊತೆ ಜೊತೆಗೆ ಅನರ್ಹ ಪಡಿತರ ಚೀಟಿದಾರರ ಬಗ್ಗೆ, ಜಿಲ್ಲೆಯ ಎಲ್ಲಾ ತಾಲೂಕಿನ ಆಹಾರ ಶಿರಸ್ತೇದಾರರು ಮತ್ತು ಆಹಾರ ನಿರೀಕ್ಷಕರು ಪರಿಶೀಲನೆ ನಡೆಸುತ್ತಿದ್ದು, ಈ ವೇಳೆ ಸಾರ್ವಜನಿಕರು ತಾವಾಗಿಯೇ ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಅನರ್ಹತೆ ಹೊಂದಿದ್ದಲ್ಲಿ ಸ್ವತಃ/ ತಾವಾಗಿಯೇ ಪಡಿತರ ಚೀಟಿಯನ್ನು ಸೆರೆಂಡರ್ ಮಾಡಬೇಕು. ಈ ಬಗ್ಗೆ ಆಹಾರ ಶಾಖೆಗೆ ಪರಿಶೀಲನೆಗೆ ಒಳಪಡಿಸಲು ತಿಳಿಸಿರುವ ಪಡಿತರ ಚೀಟಿದಾರರಿಗೆ ಅಕ್ಟೋಬರ್ ತಿಂಗಳಲ್ಲಿ ಪಡಿತರವನ್ನು ನೀಡಲು ಈಗಾಗಲೇ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
