ಇನ್ನೊಂದು ಧರ್ಮದ ಧರ್ಮಗ್ರಂಥಗಳನ್ನು ಓದಿಕೊಂಡು ಅವರ ಆಚಾರ ವಿಚಾರಗಳು ಮತ್ತು ಬೋಧನೆಗಳನ್ನು ತಿಳಿದುಕೊಂಡಾಗಲಷ್ಟೇ ಜನರ ಗೌರವ, ಪ್ರೀತಿ ಮತ್ತು ವಿಶ್ವಾಸ ಹುಟ್ಟುತ್ತದೆ ಎಂದು ಉಡುಪಿಯ ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಧರ್ಮಗುರು ಫಾದರ್ ಡೆನ್ನಿಸ್ ಡೇಸಾ ಹೇಳಿದರು.
ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಸಭಾಂಗಣದಲ್ಲಿ ಜಮಾತೆ-ಇಸ್ಲಾಮಿ-ಹಿಂದ್ ಇದರ ಮಲ್ಪೆ ಘಟಕದ ನೇತೃತ್ವದಲ್ಲಿ ಪ್ರವಾದಿ ಸಂದೇಶ ಅಭಿಯಾನದ ಪ್ರಯುಕ್ತ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಗತ್ತಿನ ಎಲ್ಲ ಧರ್ಮಗಳು ಮಾನವೀಯತೆ, ಸಾಮರಸ್ಯದ ಬದುಕಿನ ಬೋಧನೆ ಮಾಡುತ್ತವೆ. ಪ್ರವಾದಿ ಮಹಮ್ಮದ್ ಪೈಗಂಬರ್ ಬೋಧಿಸಿದ ದಯೆ, ಕ್ಷಮೆ, ನ್ಯಾಯ ಹಾಗೂ ಸಮಾನತೆ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ. ಮಾನವ ದ್ವೀಪದಲ್ಲಿ ಬದುಕುತ್ತಿಲ್ಲ ಬದಲಾಗಿ ಒಂದು ಸಮುದಾಯದಲ್ಲಿ ಬದುಕುತ್ತಿದ್ದೇವೆ. ಆದುದರಿಂದ ನನಗೆ ಸಮುದಾಯದ ಅಗತ್ಯವಿದೆ. ಹಂಚಿ ಬದುಕುವ ಅಗತ್ಯವಿದೆ. ನಾವು ಪ್ರತಿಯೊಬ್ಬರು ಗೋಡೆಯಲ್ಲಿರುವ ಒಂದು ಇಟ್ಟಿಗೆಯ ಹಾಗೆ. ಒಂದೊಂದು ಇಟ್ಟಿಗೆಯ ಜೋಡಣೆಯಿಂದ ಒಂದು ಗೋಡೆ ನಿಲ್ಲುತ್ತದೆ. ಜೊತೆಯಾಗಿ ನಿಂತರೆ ಯಾವ ಪಂಥಾಹ್ವಾನಗಳನ್ನು ಗೆಲ್ಲಬಹುದು. ಸಮಾಜದಲ್ಲಿ ಇಂದು ಸತ್ಯ, ವಿಶ್ವಾಸ ಮತ್ತು ಸಹಿಷ್ಣುತೆ ಮಾಯವಾಗಿದ್ದು, ಅದನ್ನು ಉಳಿಸುವತ್ತ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಹಿಂದೂ ಧರ್ಮದ ವಿಚಾರವಾಗಿ ಮಾತನಾಡಿದ ತೊಟ್ಟಂ ಸಮನ್ವಯ ಸರ್ವ ಧರ್ಮ ಸಮಿತಿ ಇದರ ಅಧ್ಯಕ್ಷರಾದ ರಮೇಶ್ ತಿಂಗಳಾಯ ಮಾತನಾಡಿ, ಕೂಡಿ ಬಾಳುವುದು ನಮ್ಮ ಪೂರ್ವಜರು ನಮಗೆ ಹಾಕಿಕೊಟ್ಟ ಸಂಸ್ಕೃತಿ. ಇಂದು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಪರಸ್ಪರ ಅಪನಂಬಿಕೆಗಳು ಹುಟ್ಟಿವೆ. ಇದರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ತುಂಬಿದ್ದು, ಸರ್ವ ಧರ್ಮೀಯರು ಒಟ್ಟಾಗಿ ಸೇರಿದಾಗ ಸಹಬಾಳ್ವೆಯ ಸಂದೇಶ ಸಾರಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಶಾಖೆಯ ಅಧ್ಯಕ್ಷರಾದ ಜನಾಬ್ ಇಸಾಕ್ ಪುತ್ತೂರು ಮಾತನಾಡಿ, ಪ್ರತಿಯೊಂದು ಧರ್ಮಗ್ರಂಥಗಳು ಇನ್ನೊಬ್ಬರಿಗೆ ನೋವಾಗದಂತೆ ವರ್ತಿಸುವ ಸಂದೇಶವನ್ನು ಸಾರಿದ್ದು, ಅದರಂತೆ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಪರಸ್ಪರ ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸಗಳು ನಡೆಯಬೇಕು ಎಂದರು.
ಸಮನ್ವಯ ಸರ್ವಧರ್ಮ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ, ಮಲ್ಪೆ ಸಿಎಸ್ಐ ಚರ್ಚಿನ ಪಾಸ್ಟರ್ ವಂ. ಎಡ್ವಿನ್ ಸೋನ್ಸ್, ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷರಾದ ಗಣೇಶ್ ನೆರ್ಗಿ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ಕೋರ್ಟ್ ಆದೇಶದ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್
ಮಲ್ಪೆ ಅಬೂಬಕ್ಕರ್ ಸಿದ್ದೀಕ್ ಜಾಮೀಯಾ ಮಸೀದಿಯ ಗುರುಗಳಾದ ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆ ಇದರ ಅಧ್ಯಕ್ಷರಾದ ಜನಾಬ್ ಬಿ ಸಿರಾಜ್ ಅಹ್ಮದ್ ಧನ್ಯವಾದವಿತ್ತರು. ಜಿ ಶುಐಬ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.

ಆದರೆ ಆದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ಪರಮತ ಸಹಿಷ್ಣುತೆ ಇಲ್ಲ. ಕೇವಲ ಅವರ ಧರ್ಮ ಮಾತ್ರ ಪ್ರಪಂಚದಲ್ಲಿ ಇರಬೇಕು ಎನ್ನುವುದು ಅವರ ಧೋರಣೆ. ಈ ಎರಡು ಧರ್ಮಗಳು ಕತ್ತಿಯ ಬಲದಿಂದ ಪ್ರಪಂಚದಾದ್ಯಂತ ಹರಡಿವೆ. ಸುಮ್ಮನೆ ಬೊಗಳೆ ಬಿಡುವವರ ಮಾತನ್ನು ನಂಬಬೇಡಿ.