ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಡಾ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳ ದೂರಿನ ಅನ್ವಯ ತನಿಖೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಸಹಬಾಳ್ವೆ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಹಬಾಳ್ವೆ ಸಂಘಟನೆಯ ಸಂಚಾಲಕ ಪ್ರೊ. ಫಣಿರಾಜ್ ಮಾತನಾಡಿ, “ಈ ಪ್ರತಿಭಟನೆಯು ಆಡಳಿತ ಸರ್ಕಾರದ ಪರವಾಗಿ ಅಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು ಅಸ್ಥಿರವಾಗಿಸಲು ನಡೆಯುತ್ತಿರುವ ಹುನ್ನಾರದ ವಿರುದ್ಧವಾಗಿದೆ” ಎಂದರು.
“2020ರಲ್ಲಿ ನಡೆದಿದೆ ಎನ್ನಲಾದ ಮುಡಾ ಹಗರಣದ ಕುರಿತು ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯೇ ಆಗಿರಲಿಲ್ಲ. ಅಧಿಕಾರದಲ್ಲಿ ಇಲ್ಲದಾಗ ಹಗರಣ ನಡೆದಿದೆ ಎನ್ನುವುದನ್ನು ರಾಜ್ಯಪಾಲರು ನಂಬುವುದು ಹಾಸ್ಯಾಸ್ಪದ” ಎಂದು ಹೇಳಿದರು.

ವಿರೋಧ ಪಕ್ಷದಲ್ಲಿರುವ ಬಿಜೆಪಿಯ ಹಲವರು ಮಂದಿ ಅಂದು ಆಡಳಿತ ಪಕ್ಷದ ಭಾಗವಾಗಿದ್ದರು. ಜಿ.ಟಿ ದೇವೇಗೌಡ ಆ ಸಂದರ್ಭದಲ್ಲಿ ಮುಡಾದ ಮುಖ್ಯಸ್ಥರಾಗಿದ್ದರು. ಆದರೆ ಪ್ರಸ್ತುತ ಯಾವುದೇ ಆಧಾರ ಇಲ್ಲದೇ ವಿರೋಧ ಪಕ್ಷ ಇದರ ಕುರಿತು ಆರೋಪ ಮಾಡುತ್ತಿದೆ ಎಂದು ಹೇಳಿದರು.
ಅಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದವರು ಯಾವ ಕೃತ್ಯಕ್ಕೂ ಹೇಸುವವರಲ್ಲ..ಅದರ ಮುಂದುವರಿದ ಭಾಗವಾಗಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯನ್ನು ನೋಡಬಹುದಾಗಿದೆ. ಇಂತಹ ನಿರ್ಣಯಗಳನ್ನು ಸಂವಿಧಾನ ಸ್ಥಾನದಲ್ಲಿ ಕುಳಿತು ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಒಳ್ಳೆಯದಲ್ಲ. ಯಾವ ಸರಕಾರ, ವ್ಯಕ್ತಿ ಇದ್ದರೂ ಈ ನಡೆ ಸರಿಯಿಲ್ಲ. ಇದನ್ನು ಖಂಡಿಸಬೇಕು ಎಂದರು.
ಪ್ರತಿಭಟನೆಯನ್ನುದ್ದೇಶಿಸಿ ಫಾ.ವಿಲಿಯಂ ಮಾರ್ಟಿಸ್, ಮಂಜುನಾಥ್ ಗಿಳಿಯಾರ್ ಬಾಲಕೃಷ್ಣ ಶೆಟ್ಟಿ, ಇದ್ರಿಸ್ ಹೂಡೆ ಸೇರಿದಂತೆ ಹಲವಾರು ಮಂದಿ ಮಾತನಾಡಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
