ರಾಜ್ಯದ ಬಿಜೆಪಿ ನಾಯಕರುಗಳು ಅನಗತ್ಯವಾಗಿ ಜನಸಾಮಾನ್ಯರನ್ನು ಮೋಸಗೊಳಿಸುತ್ತಿರುವುದು ಖಂಡನೀಯ. ಬಿಜೆಪಿ ನಾಯಕರುಗಳಿಗೆ ಏನಾದರೂ ಧಮ್ ಇದ್ದರೆ ಪ್ರಪಂಚದಲ್ಲಿ ಬೆಲೆ ಏರಿಕೆ ಪ್ರಧಾನಿಯೆಂದೆ ಹೆಸರುಗಳಿಸಿದ ನರೇಂದ್ರ ಮೋದಿಯವರ ವಿರುದ್ಧ ಪ್ರತಿಭಟಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ಅಡುಗೆ ಅನಿಲದ ಬೆಲೆ, ಪೆಟ್ರೋಲ್ ಬೆಲೆ, ಡೀಸೆಲ್ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣ ಇಳಿಕೆಯಾಗಿದ್ದು ಬಿಜೆಪಿಯ ಮೋದಿಯ ಆಡಳಿತದಲ್ಲಿ ಯಾವುದೇ ಬೆಲೆಯನ್ನು ಇಳಿಕೆ ಮಾಡದೆ ದುಪ್ಪಟ್ಟು ಜಾಸ್ತಿ ಮಾಡಿ ನಮ್ಮ ದೇಶದ ಹಾಗೂ ನಮ್ಮ ರಾಜ್ಯದ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಕೊಡುಗೆಯನ್ನು ನಿರಂತರವಾಗಿ ನೀಡುತ್ತಿದ್ದು, ಬಡವರು ಮಧ್ಯಮ ವರ್ಗದವರು ರೈತರು ಕಾರ್ಮಿಕರು ದೇಶದಲ್ಲಿ ದಿನ ಕಳೆಯುವುದೇ ಕಷ್ಟವಾಗಿದೆ. ಇಂತಹ ಕೆಟ್ಟ ಆಡಳಿತ ನಡೆಸುತ್ತಿರುವ ಈ ಬಿಜೆಪಿ ನಾಯಕರ ವಿರುದ್ಧವೇ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಜಿಎಸ್‌ಟಿ ಹಣವನ್ನು ನೀಡದೆ, ರಾಜ್ಯದ ಜನರಿಗೆ ಅನ್ಯಾಯ, ದ್ರೋಹ ಮಾಡಿದ ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಲಿ. ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡದಂತೆ ಮಾಡಲು ಕೇಂದ್ರ ಹಾಗೂ ರಾಜ್ಯದ ಬಿಜೆಪಿಯ ನಾಯಕರು ಮುಂದಾಗಿದ್ದು, ಕಾಂಗ್ರೆಸ್ ಸರಕಾರದ ವಿರುದ್ಧ ಅನಗತ್ಯ ಪ್ರತಿಭಟನೆಯನ್ನು ಈ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇಲ್ಲಿಯ ಬಿಜೆಪಿ ನಾಯಕರುಗಳಿಗೆ ರಾಜ್ಯದ ಜನತೆಯ ಬಗ್ಗೆ ಏನಾದರೂ ಕಾಳಜಿ ಇದ್ದರೆ ಕೇಂದ್ರದ ಬಿಜೆಪಿ ನಾಯಕರ ಬಳಿಗೆ ತೆರಳಿ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಪ್ರತಿಭಟಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.