ಉಡುಪಿ ಜಿಲ್ಲೆಯ ಕಾರ್ಕಳ- ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ಆರಂಭಿಸಲು ಉದ್ದೇಶಿಸಲಾಗಿದ್ದ ಟೋಲ್ ಸಂಗ್ರಹ ಕೇಂದ್ರಕ್ಕೆ ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ, ಅಲ್ಲದೇ, ಈ ಬಗ್ಗೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಅಧಿಕೃತ ಆದೇಶ ಕೂಡ ಹೊರಡಿಸಿದ್ದಾರೆ.
ಕಾರ್ಕಳ- ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹ ಕೇಂದ್ರವನ್ನು ರದ್ದುಪಡಿಸುವ ನಿಟ್ಟಿನಲ್ಲಿ ಲೋಕೋಪಯೊಗಿ ಸಚಿವರಾದ ಸತೀಶ್ ಜಾರಕಿಹೊಳಿಯವರಿಗೆ ಕಾಪು ಕಾಂಗ್ರೆಸ್ ಪಕ್ಷದ ನಾಯಕರ ನಿಯೋಗವು ತೆರಳಿ ಮನವಿ ಸಲ್ಲಿಸಿತ್ತು.
ಈ ನಡುವೆ ಗುರುವಾರ ಉಡುಪಿಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಟೋಲ್ ಗೇಟ್ ಹೋರಾಟ ಸಮಿತಿಯ ಮುಖಂಡರು, ಆಗಸ್ಟ್ 24ರ ಶನಿವಾರ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಈ ನಡುವೆಯೇ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಅಧಿಕೃತ ಆದೇಶ ಕೂಡ ಹೊರಡಿಸಿದ್ದು, ಕಾರ್ಯಾದೇಶ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ತಿಳಿಸಿದ್ದಾರೆ.

ಆದೇಶದಲ್ಲಿ, “ಟೋಲ್ ಗೇಟ್ ವಿಷಯವು ಸಾರ್ವಜನಿಕ ಹಿತದೃಷ್ಟಿಯಿಂದಾಗಿ ಸೂಕ್ಷ್ಮತೆಯಿಂದ ಕೂಡಿರುವುದರಿಂದ, ಚಿನಡ್ಕ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲು ಉದ್ದೇಶಿಸಿರುವ ಸುಂಕ ವಸೂಲಾತಿ ಕೇಂದ್ರದ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವರೆಗೆ ಈಗಾಗಲೇ ಕಾಮಗಾರಿ ನೀಡಲಾಗಿರುವ ಸಂಸ್ಥೆಗೆ ನೀಡಲಾಗಿರುವ ಕಾರ್ಯಾದೇಶ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದು, ಕಂಚಿನಡ್ಕ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ” ಎಂದು ಲೋಕೋಪಯೋಗಿ ಸಚಿವರು ಉಲ್ಲೇಖಿಸಿದ್ದಾರೆ.
ಶನಿವಾರದ ಪ್ರತಿಭಟನೆ ನಡೆಯಲಿದೆ: ಟೋಲ್ಗೇಟ್ ಹೋರಾಟ ಸಮಿತಿ
“ಸರ್ಕಾರದ ತಾತ್ಕಾಲಿಕ ತಡೆದ ಆದೇಶದ ಹೊರತಾಗಿಯೂ ಕಂಚಿನಡ್ಕ ಟೋಲ್ ವಿರೋಧಿಸಿ ಆಗಸ್ಟ್ 24ರ ಶನಿವಾರ ಪಡುಬಿದ್ರೆ ಸಮೀಪ ಕಂಚಿನಡ್ಕದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಬೃಹತ್ ಪ್ರತಿಭಟನೆ ನಡೆಯಲಿದೆ” ಎಂದು ಟೋಲ್ ಗೇಟ್ ಹೋರಾಟ ಸಮಿತಿಯ ಮುಖಂಡರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಕಾರ್ಕಳ – ಪಡುಬಿದ್ರೆ ಟೋಲ್ ಗೇಟ್ಗೆ ವಿರೋಧ: ಆ. 24ರಂದು ಬೃಹತ್ ಪ್ರತಿಭಟನೆ
“ರಾಜ್ಯ ಸರ್ಕಾರವು ತಾತ್ಕಾಲಿಕ ಆದೇಶ ನೀಡಿದೆಯಷ್ಟೇ. ಸುಂಕ ವಸೂಲಾತಿ ಕೇಂದ್ರದ ಪ್ರಸ್ತಾವನೆಯಿಂದ ಸರಕಾರ ಸಂಪೂರ್ಣವಾಗಿ ಹಿಂದೆ ಸರಿಯಬೇಕು. ಈ ರಸ್ತೆಯಲ್ಲಿ ಜನ ಸಾಮಾನ್ಯರಿಗೆ ಹೊರೆಯಾಗುವ ಟೋಲ್ ಗೇಟ್ ಪ್ರಸ್ತಾವನೆ ಶಾಶ್ವತವಾಗಿ ರದ್ದಾಗಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಇರಲಿದೆ. ನಾಳೆಯ ಪ್ರತಿಭಟನೆ ರದ್ದು ಮಾಡುವುದಿಲ್ಲ. ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಶಾಂತಿಯುತವಾಗಿ ನಡೆಯಲಿರುವ ಶನಿವಾರದ ಪ್ರತಿಭಟನೆಯಲ್ಲಿ ಭಾಗವಹಿಸಬೇಕು” ಎಂದು ಟೋಲ್ ಗೇಟ್ ಹೋರಾಟ ಸಮಿತಿಯ ಹೋರಾಟಗಾರ ಸರ್ವಜ್ಞ ತಂತ್ರಿ ಬೆಳ್ಮಣ್ ತಿಳಿಸಿದ್ದಾರೆ.
