ಮನೆಯಲ್ಲಿ ಒಂಟಿಯಾಗಿದ್ದ ಯುವಕನನ್ನು ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ಎಂಬಲ್ಲಿ ಶನಿವಾರ (ಮಾ.2) ರಾತ್ರಿ ವೇಳೆ ನಡೆದಿದೆ.
ಕೊಲೆಗೀಡಾದ ಯುವಕನನ್ನು 36 ವರ್ಷದ ಕೃಷ್ಣ ಎಂದು ಗುರುತಿಸಲಾಗಿದೆ. ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ, ಶನಿವಾರ ರಾತ್ರಿ ಮನೆಯಲ್ಲಿ ಏಕಾಂಗಿಯಾಗಿ ಊಟ ಮಾಡುತ್ತಿದ್ದ ವೇಳೆ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಪಿಸ್ತೂಲಿನಿಂದ ಗುಂಡಿಕ್ಕಿ ಪರಾರಿಯಾಗಿದ್ದಾರೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣ ಸ್ಥಳದಲ್ಲೇ ಮತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಫೈರಿಂಗ್ ಶಬ್ದ ಕೇಳಿದ್ದ ನೆರೆಮನೆಯವರು, ಪಟಾಕಿಯ ಶಬ್ದವೆಂದು ಸುಮ್ಮನೆ ಇದ್ದರು. ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
