ಸಮಾಜಸೇವಕ ನಿತ್ಯಾನಂದ ಒಳಕಾಡುರವರು ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯನ್ನು ರಕ್ಷಿಸಿದ್ದು, ಮಹಿಳೆಗೆ ಮಾನಸಿಕ ಖಿನ್ನತೆ, ಅನಾರೋಗ್ಯದ ಲಕ್ಷಣಗಳು ಕಂಡುಬಂದಿರುವುದರಿಂದ ಒಳಕಾಡು ಅವರೇ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ರಕ್ಷಿಸಲ್ಪಟ್ಟ ಮಹಿಳೆಯ ಹೆಸರು ಸುಕನ್ಯಾ(40). ಪತಿ ಡಾ. ಹೇಮಂತ್ ರಾಜ್ ದೆಹಲಿ ಎಂದು ಕನ್ನಡದಲ್ಲಿ ಅಸ್ಪಷ್ಟ ಮಾಹಿತಿ ನೀಡಿದ್ದಾರೆ.
ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಮಹಿಳೆಯು ಅಸಹಾಯಕ ಸ್ಥಿತಿಯಲ್ಲಿರುವುದನ್ನು ತಿಳಿದ ರೈಲ್ವೆ ಆರ್‌ಪಿಎಫ್ ಜೀನಾ ಪಿಂಟೋ ಅವರು, ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ದಾಖಲು ಪ್ರಕ್ರಿಯೆ ನಡೆಸುವಾಗ ಮಣಿಪಾಲ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಗಳಾದ ಸುಮಲತಾ, ವಿದ್ಯಾ ಟಿ ನೆರವಾದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ವಿವಿ ಘಟಿಕೋತ್ಸವ; ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗೆ ಗೌರವ ಡಾಕ್ಟರೇಟ್
ಸಂತ್ರಸ್ತ ಮಹಿಳೆಯ ಸಂಬಂಧಿಕರು ಉಡುಪಿ ಜಿಲ್ಲಾ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಈಗಾಗಲೇ ಈ ಕರಾವಳಿ ಭಾಗದಲ್ಲಿ ಹಲವು ಅಪರಿಚಿತ ಶವ ಪತ್ತೆ ಪ್ರಕರಣಗಳು, ಅಪರಿಚಿತ ವ್ಯಕ್ತಿಗಳ ರಕ್ಷಣೆಯಂತಹ ಪ್ರಕರಣಗಳನ್ನು ಆಗಾಗ ಕಾಣುತ್ತಲೇ ಇರುತ್ತೇವೆ. ಆದರೆ ಸತ್ತಂತಹ ಅಪರಿಚಿತ ವ್ಯಕ್ತಿಗಳ ತನಿಖೆಯಾಗಿದೆಯೇ, ವಾರಸುದಾರರು ಪತ್ತೆಯಾಗಿದ್ದಾರೆಯೇ, ಅಥವಾ ಯಾವ ಕಾರಣಗಳಿಂದಾಗಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿವೇ ಉಳಿದಿವೆ. ಸ್ಥಳೀಯ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಇಂತಹ ಪ್ರಕರಣಗಳನ್ನು ತನಿಖೆ ಮಾಡಿ, ಉತ್ತರ ನೀಡಲು ಮುಂದಾಗಬೇಕು. ಜತೆಗೆ ಮೃತಪಟ್ಟವರ ಹಿನ್ನೆಲೆ ತಿಳಿದು ಅವರು ಹೊರಗಿನಿಂದ ಬರುವ ಕಾರ್ಮಿಕರು ಎಂದಾದರೆ, ನಿರ್ಗತಿಕ ಕೇಂದ್ರಗಳ ಕುರಿತು ಮಾಹಿತಿ ನೀಡಿ ಅಂತಹವರಿಗೆ ಅಲ್ಲಿ ವ್ಯವಸ್ಥೆ ಮಾಡಬಹುದೇ ಎಂಬುದನ್ನು ಕಂಡುಕೊಳ್ಳುವುದು ಒಳಿತಾಗಬಹುದು.