ರಕ್ಷಣೆ ಮಾಡಿದ ಮಕ್ಕಳು, ಭಿಕ್ಷುಕರು, ಮಾನಸಿಕ ಅಸ್ವಸ್ಥರು ಹಾಗೂ ಅಸಹಾಯಕ ಮಹಿಳೆಯರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಪುನರ್‌ವಸತಿ ಕೇಂದ್ರ ಇಲ್ಲ. ತುರ್ತಾಗಿ ಉಡುಪಿ ಜಿಲ್ಲೆಗೆ ಸುಸಜ್ಜಿತ ಪುನರ್‌ವಸತಿ ಕೇಂದ್ರವನ್ನು ಸರ್ಕಾರ ಮಂಜೂರು ಮಾಡಬೇಕು ಎಂದು ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದಲ್ಲಿ ಸಾಮಾಜಿಕ ಕಾರ್ಯಕರ್ತರೊಂದಿಗೆ ಚರ್ಚಾ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮುಳುಗ ತಜ್ಞ ಈಶ್ವರ ಮಲ್ಪೆ, ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಗಣೇಶ್‌ರಾಜ್ ಸರಳೇಬೆಟ್ಟು ಭಾಗಿಯಾಗಿ ಮಾತನಾಡಿದರು.
ಚರ್ಚೆಯ ವೇಳೆ ಮಾತನಾಡಿದ ನಿತ್ಯಾನಂದ ಒಳಕಾಡು, “ನಾವು ಅನಾಥ ಮಕ್ಕಳನ್ನು ರಕ್ಷಣೆ ಮಾಡುತ್ತೇವೆ. ಆದರೆ, ಸಂಬಂಧಪಟ್ಟವರು ಕೌನ್ಸಿಲಿಂಗ್ ಮಾಡಿ ಅವರನ್ನು ಬಿಟ್ಟುಬಿಡುತ್ತಾರೆ. ಯಾಕೆಂದರೆ ಇಲ್ಲಿ ಅವರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಅದೇ ರೀತಿ ಭಿಕ್ಷುಕರು, ಮಾನಸಿಕ ಅಸ್ವಸ್ಥರಿಗೆ ಸfಕಾರಿ ಮಟ್ಟದಲ್ಲಿ ಪುನರ್ ವಸತಿ ಕೇಂದ್ರದ ವ್ಯವಸ್ಥೆ ಇಲ್ಲ. ಇದರಿಂದ ಸಾಮಾಜಿಕ ಕಾರ್ಯಕರ್ತರು ಪರದಾಡುವಂತಾಗಿದೆ. ಕೆಲವು ವರ್ಷಗಳ ಹಿಂದೆ ನಾವು ಜಿಲ್ಲಾಧಿಕಾರಿಗೆ ಮನವಿ ಕೊಟ್ಟರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ” ಎಂದರು.
ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ, “ಈ ವರ್ಷ ಮಾನಸಿಕ ಸ್ಥಿಮಿತ ಕಳೆದುಕೊಂಡು ತಿರುಗಾಡುತ್ತಿದ್ದ ಮಹಿಳೆಯರನ್ನು ರಕ್ಷಣೆ ಮಾಡಿದ್ದೇವೆ. ಆದರೆ ಅವರಿಗೆ ಪುನರ್‌ವಸತಿ ಕಲ್ಪಿಸಲು ನಮ್ಮಲ್ಲಿ ಯಾವುದೇ ಸೌಲಭ್ಯ ಇಲ್ಲ. ಇವರನ್ನು ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ನಮ್ಮ ಮನವಿಗೆ ಹಿರಿಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಸಾಕಷ್ಟು ಮಂದಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಎಚ್‌ಐವಿ ಸೋಂಕಿತ ಮಹಿಳೆಯರು ಬೀದಿಬದಿ ತಿರುಗಾಡುತ್ತಿದ್ದರೂ ಅವರ ರಕ್ಷಣೆಗೆ ಯಾವುದೇ ವ್ಯವಸ್ಥೆ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಜೀವರಕ್ಷಕ ಈಶ್ವರ ಮಲ್ಪೆ, “ಸರ್ಕಾರ ನಮಗೆ ಉಡುಪಿಯಲ್ಲಿ ಐದು ಎಕರೆ ಜಾಗ ನೀಡಿದರೆ ನಾವೇ ಪುನರ್‌ವಸತಿ ಕೇಂದ್ರವನ್ನು ಸ್ಥಾಪಿಸುವ ಜವಾಬ್ದಾರಿ ವಹಿಸಿಕೊಳ್ಳುತ್ತೇವೆ” ಎಂದರು.
“ಮಲ್ಪೆ ಬಂದರಿಂದ ಶೇ.50ರಷ್ಟು ಹೂಳು ತೆಗೆದಿದ್ದು, ಇದರಿಂದ ನೀರಿಗೆ ಬಿದ್ದು ಸಾಯುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ, ಉಳಿದ ಶೇ.50ರಷ್ಟು ಹೂಳನ್ನು ಸರ್ಕಾರ ಕೂಡಲೇ ತೆಗೆಯಬೇಕು. ಮಲ್ಪೆ ಬೀಚ್ನಲ್ಲಿ ಕಸದ ರಾಶಿ ತುಂಬಿ ಹೋಗಿದೆ. 50-60ಟನ್ ಕಸ ಸಮುದ್ರದಿಂದ ತೀರಕ್ಕೆ ಬಂದು ಬಿದ್ದಿದೆ” ಎಂದು ತಿಳಿಸಿದರು.
“ಅಪಘಾತ ಹಾಗೂ ನೀರಿಗೆ ಬಿದ್ದು ಸಾಯುವ ಪ್ರಕರಣಗಳಲ್ಲಿ ಬಹುತೇಕ ಮಂದಿ ಮದ್ಯ ಅಥವಾ ಮಾದಕ ದ್ರವ್ಯ ಸೇವೆನೆ ಮಾಡಿರುತ್ತಾರೆ. ಆದ್ದರಿಂದ ಪೊಲೀಸ್ ಇಲಾಖೆಯು ಮಾದಕ ದ್ರವ್ಯ ಜಾಲದ ಮೂಲವನ್ನು ಪತ್ತೆ ಹಚ್ಚಿ, ಕ್ರಮ ತೆಗೆದುಕೊಳ್ಳಬೇಕು. ಅದೇ ರೀತಿ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ಕೂಡ ಈ ಕುರಿತು ಎಚ್ಚರ ವಹಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ಉಡುಪಿ | ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಅವಕಾಶ ನೀಡಬಾರದೆಂದು ಪೊಲೀಸ್ ಉಪನಿರೀಕ್ಷರಿಗೆ ಮನವಿ
ಗಣೇಶ್‌ರಾಜ್ ಸರಳೇಬೆಟ್ಟು ಮಾತನಾಡಿ, “ಹೆಚ್ಚು ಬೆಂಕಿ ಅನಾಹುತಗಳು ಸಂಭವಿಸುವ ಮಣಿಪಾಲಕ್ಕೆ ಅಗ್ನಿಶಾಮಕ ದಳ ಠಾಣೆ ಮಂಜೂರು ಮಾಡಬೇಕು. ಉಡುಪಿ ಜಿಲ್ಲೆಗೆ ಸುಸಜ್ಜಿತ ವಿದ್ಯುತ್ ಚಿತಗಾರ ಬೇಕಾಗಿದೆ. ಪ್ರವಾಸೋದ್ಯಮ ದೃಷ್ಠಿಯಿಂದ ಮಣಿಪಾಲದಲ್ಲಿರುವ ಅರ್ಬಿ ಪಾಲ್ಸ್ ಅಭಿವೃದ್ಧಿ ಪಡಿಸಬೇಕು. ಪರ್ಕಳದ ರಾಷ್ಟ್ರೀಯ ಹೆದ್ದಾರಿ ಕಾಮ ಗಾರಿ ಕೂಡಲೇ ಪೂರ್ಣಗೊಳಿಸಬೇಕು. ಕಾಡು ಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಕಾರ್ಯಕ್ರಮವನ್ನು ಸಂಸ್ಕೃತಿ ಸಿರಿ ಟ್ರಸ್ಟ್‌ನ ಆಡಳಿತ ವಿಶ್ವಸ್ಥ ಹಾಗೂ ವಿಮರ್ಶಕ ಪ್ರೊ.ಮುಳೀಧರ ಉಪಾಧ್ಯ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಪತ್ರಕರ್ತ ಶಶಿಧರ ಮಾಸ್ತಿಬೈಲು ಸಾಮಾಜಿಕ ಕಾರ್ಯಕರ್ತರನ್ನು ಪರಿಚಯಿಸಿ ದರು. ರಜತ ಮಹೋತ್ಸವ ಸಮಿತಿ ಸಂಚಾಲಕ ಮುಹಮ್ಮದ್ ಶರೀಫ್ ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮೈಕಲ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.