ಪಂಚಮಿ ಟ್ರಸ್ಟ್ (ರಿ) ಉಡುಪಿ ಪ್ರಾಯೋಜಿತ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ( ರಿ) ಉಡುಪಿ ಕೊಡಮಾಡುವ ‘ಪಂಚಮಿ ಪುರಸ್ಕಾರ- 2025’ಕ್ಕೆ ಕನ್ನಡ ರಂಗಭೂಮಿಯ ಹಿರಿಯ ನಟ ಮಂಡ್ಯ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಪುರಸ್ಕಾರವು ಗೌರವ ಧನ 1,00,000(ಒಂದು ಲಕ್ಷ ರೂಪಾಯಿ)ಯೊಂದಿಗೆ ಪ್ರಶಸ್ತಿ ಪತ್ರ, ಪದಕ ಒಳಗೊಂಡಿದೆ. ಜನವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯ ಸಂಚಾಲಕರಾದ ರವಿರಾಜ್ ಎಚ್. ಪಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿಯ ಗೌರವಾಧ್ಯಕ್ಷರಾದ ಉಡುಪಿ ವಿಶ್ವನಾಥ ಶೆಣೆೈ, ಉಪಾಧ್ಯಕ್ಷರಾದ ನಾಗರಾಜ್ ಹೆಬ್ಬಾರ್ ಮತ್ತು ವಿಘ್ನೇಶ್ವರ ಅಡಿಗ , ಪುರಸ್ಕಾರ ಸಮಿತಿಯ ಸಂಯೋಜಕರಾದ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.
ಮಂಡ್ಯ ರಮೇಶ್ ಪರಿಚಯ
ನಟ, ನಿರ್ದೇಶಕ, ರಂಗಶಿಕ್ಷಕ, ರಂಗ ಸಂಘಟಕ ಹಾಗೂ ಕಿರುತೆರೆ-ಚಲನಚಿತ್ರಗಳ ಹಿರಿಯ ಕಲಾವಿದ. ಮೈಸೂರಿನ ನಟನ ಸಂಸ್ಥೆ ಹಾಗೂ ರಂಗಶಾಲೆಯ ಸ್ಥಾಪಕ. ಹಿರಿಯ ರಂಗಕರ್ಮಿ. ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಅಧ್ಯಯನ ಮತ್ತು ನೀನಾಸಂ ತಿರುಗಾಟದ ಮೊದಲ ಮೂರು ವರ್ಷಗಳ ಕಲಾವಿದ. ಮೈಸೂರಿನ ರಂಗಾಯಣದಲ್ಲಿ ಬಿ.ವಿ.ಕಾರಂತರ ಗರಡಿಯಲ್ಲಿ ರಂಗಕಾಯಕ. ಪ್ರಸನ್ನ, ಜಂಬೆ, ಕೆ.ವಿ.ಸುಬ್ಬಣ್ಣ, ಫಿಟ್ಸ್ ಬೆನೆವಿಟ್ಸ್ ಮುಂತಾದ ಗಣ್ಯ ನಿರ್ದೇಶಕರೊಂದಿಗೆ ದುಡಿದ ಅನುಭವ ಹೊಂದಿದ್ದಾರೆ.
ಕೇಂದ್ರ ಸಂಸ್ಕೃತಿ ಇಲಾಖೆಯ ರಂಗತಜ್ಞರ ಸಮಿತಿ ಸದಸ್ಯರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ರಂಗಾಯಣದ ರಂಗಸಮಾಜದ ಸದಸ್ಯರಾಗಿ, ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಭಾರತದ ಪುಟ್ಟ ಹಳ್ಳಿ – ಮಹಾನಗರಗಳಾದಿಯಾಗಿ ಅಮೇರಿಕಾದ ನ್ಯೂಯಾರ್ಕ್, ಕ್ಯಾಲಿಫೋರ್ನಿಯ, ವಾಷಿಂಗ್ಟನ್ ಡಿ.ಸಿ., ಆಸ್ಟೇಲಿಯಾ, ಜರ್ಮನಿ, ಆಸ್ಟಿçಯಾ, ಲಂಡನ್, ರ‍್ಲೆಂಡ್, ದುಬೈ, ನೇಪಾಳ, ಥೈಲ್ಯಾಂಡ್, ಸಿಂಗಾಪುರ್, ಶ್ರೀಲಂಕಾ, ಜಪಾನ್ ಮುಂತಾದ ಅನೇಕ ರಾಷ್ಟ್ರಗಳಲ್ಲಿ ನಾಟಕ ಪ್ರದರ್ಶನ , ಶಿಬಿರಗಳನ್ನು ನಡೆಸಿದ ಅನುಭವ. 2018ರ ನವೆಂಬರ್ ತಿಂಗಳಲ್ಲಿ ಜಪಾನ್‌ನಲ್ಲಿ ನಡೆದ ಕನ್ನಡ ಹಬ್ಬದಲ್ಲಿ ಪಾಲ್ಗೊಂಡು ರಂಗಭೂಮಿ ಮತ್ತು ಕನ್ನಡದ ಕುರಿತಾಗಿ ಉಪನ್ಯಾಸ ನೀಡಿದ್ದಾರೆ.
ಸಂಕ್ರಾಂತಿ, ಮಹಿಮಾಪುರ, ಮಾರನಾಯಕ, ಊರುಭಂಗ, ಯುಯುತ್ಸು, ಚೋರ ಚರಣದಾಸ, ಮಣ್ಣಿನಗಾಡಿ, ನಾಗಮಂಡಲ, ಅಗ್ನಿ ಮತ್ತು ಮಳೆ, ಚಾಮ ಚಲುವೆ, ಸುಭದ್ರಾ ಕಲ್ಯಾಣ, ಈ ಕೆಳಗಿನವರು, ಸಾಯೋ ಆಟ, ಅಲೀಬಾಬಾ ನಾಯಿತಿಪ್ಪ, ರತ್ನಪಕ್ಸಿ, ರಾಮ ರಹೀಮ, ಮೃಚ್ಛಕಟಿಕ, ಬೆತ್ತಲೆ ಅರಸನ ರಾಜರಹಸ್ಯ, ಕೃಷ್ಣೇಗೌಡರ ಆನೆ, ಸ್ಥಾವರವೂ ಜಂಗಮ ಮುಂತಾದ ಅಸಂಖ್ಯಾತ ನಾಟಕಗಳ ನಿರ್ದೇಶನ. ಜನುಮದ ಜೋಡಿ, ನಾಗಮಂಡಲ, ಕನಸುಗಾರ, ಅಮೃತಧಾರೆ, ಮಠ, ರನ್ನ, ಒಗ್ಗರಣೆ, ಕಿರಗೂರಿನ ಗಯ್ಯಾಳಿಗಳು, ದಿ ವಿಲನ್, ಯಜಮಾನ, ಡೇರ್ ಡೆವಿಲ್ ಮುಸ್ತಾಫ, ತಲೆದ಼ಂಡ, ಫಿಸಿಕ್ಸ್ ಟೀಚರ್, ಕ್ರಾಂತಿ ಮುಂತಾದ 300ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ಮತ್ತು ಕಿರುತೆರೆಯಲ್ಲಿ ಅಸಂಖ್ಯ ಧಾರಾವಾಹಿಗಳು, ಮಜಾ ಟಾಕೀಸ್ ಇತ್ಯಾದಿ ಕಿರುತೆರೆಯ ಕಾಮೆಡಿ ಶೋಗಳಲ್ಲಿ ಅಭಿನಯಿಸಿದ್ದಾರೆ.
ನಾಗಮಂಡಲದಲ್ಲಿನ ಅಭಿನಯಕ್ಕೆ ರಾಜ್ಯಸರ್ಕಾರದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಂಗಭೀಷ್ಮ, ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಮುಂತಾದವುಗಳು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಜ್ಯೂರಿಗಳ ವಿಶೇಷ ಮನ್ನಣೆಗೆ ಪಾತ್ರವಾದ ಉಪ್ಪಿನ ಕಾಗದ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಭಾರತ ಜ್ಞಾನ-ವಿಜ್ಞಾನ ಸಮಿತಿಯಿಂದ ಅ.18,19ರಂದು ‘ಟೀಚರ್ ಶೈಕ್ಷಣಿಕ ಹಬ್ಬ’
ಮೈಸೂರಿನಲ್ಲಿ ‘ನಟನ’ ರಂಗಶಾಲೆ ಜೊತೆಯಲ್ಲೇ ನಟನ ರಂಗಮಂದಿರ ಕಟ್ಟಿ, ನೂರಾರು ಕಲಾವಿದರನ್ನು ಬೆಳೆಸಿ ಮೈಸೂರಿನಲ್ಲಿ ರಂಗಕಾಯಕಕ್ಕೆ ಒಂದು ಪ್ರತಿಷ್ಠೆಯನ್ನು ತಂದುಕೊಟ್ಟಿರುವ ಅಪರೂಪದ ಸಾಂಸ್ಕೃತಿಕ ಸಾಧಕ ಇವರು.
ಇಂಥ ರಂಗ ಸಾಧಕ ಮಂಡ್ಯ ರಮೇಶ್ ಅವರಿಗೆ 2017ರ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಕರ್ನಾಟಕ ನಾಟಕ ಅಕಾಡೆಮಿಯು ಗೌರವಿಸಿದೆ.
