ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹತನಾದ ದಲಿತ, ಆದಿವಾಸಿ ನಾಯಕ ವಿಕ್ರಂ ಗೌಡ ಅವರ ಅಂತ್ಯಕ್ರಿಯೆಯನ್ನು ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕೂಡ್ಲು ಸಮೀಪದಲ್ಲಿರುವ ವಿಕ್ರಂ ಗೌಡರ ಮೂಲ ಮನೆಯಲ್ಲೇ ಪೊಲೀಸ್ ಬಂದೋಬಸ್ತ್‌ನಲ್ಲಿ ನೆರವೇರಿಸಲಾಯಿತು.
ಸೋಮವಾರ ರಾತ್ರಿ 12:15 ಗಂಟೆ ಸುಮಾರಿಗೆ ವಿಕ್ರಂ ಗೌಡ ಮತ್ತು ಇತರರು ಗ್ರಾಮಕ್ಕೆ ದಿನಸಿ ತರಲು ಬಂದಿದ್ದರು. ಆಗ ಎಎನ್‌ಎಫ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿಕ್ರಂ ಗೌಡರನ್ನು ಎನ್‌ಕೌಂಟರ್ ನಡೆಸಿ, ಹತ್ಯೆ ಮಾಡಿತ್ತು.
ಹೆಬ್ರಿ ತಾಲೂಕಿನ ಕೂಡ್ಲು ಸಮೀಪದ ತಿಂಗಳೆ ಬಳಿಯ ಮನೆಯಲ್ಲೇ ವಿಕ್ರಂ ಗೌಡ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ತೀರ್ಮಾನ ಮಾಡಿದ್ದರಿಂದ, ಅಲ್ಲೇ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.

ಸದ್ಯ ಮೂಲ ಮನೆಯಲ್ಲಿ ಯಾರೂ ವಾಸವಿಲ್ಲ. ಮನೆಯನ್ನು ಕೆಡವಿ ಹೊಸಮನೆ ನಿರ್ಮಾಣ ಮಾಡಲಾಗುತ್ತಿದ್ದು, ಮನೆಯ ಆವರಣದಲ್ಲೇ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧಾರ ಮಾಡಿದ್ದರು.
“ನನ್ನ ಅಣ್ಣನನ್ನು ಅನಾಥ ಶವವಾಗಿ ಸುಡುವುದು ಬೇಡ. ಅಣ್ಣನಿಗೆ ಕೂಡ್ಲು ಪರಿಸರದಲ್ಲಿ ಒಂದು ಎಕರೆ ಭೂಮಿ ಇದೆ. ಆ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡುತ್ತೇವೆ” ಎಂದು ವಿಕ್ರಂ ಗೌಡ ಸಹೋದರಿ ಸುಗುಣ ತಿಳಿಸಿದ್ದರು. ಅದರಂತೆಯೇ, ಸಹೋದರ ಸುರೇಶ ಗೌಡ ಪೊಲೀಸರ ಸಮ್ಮುಖದಲ್ಲೇ ವಿಧಿವಿಧಾನ ನೆರವೇರಿಸಿದ್ದಾರೆ.
ವಿಕ್ರಂ ಗೌಡನ ಅಂತ್ಯಕ್ರಿಯೆಯಲ್ಲಿ ಸಂಬಂಧಿಕರು, ಊರಿನ ಪ್ರಮುಖರು ಭಾಗಿಯಾಗಿದ್ದರು. ಉಡುಪಿ ಹೆಚ್ಚುವರಿ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಅನ್ನು ಮಾಡಲಾಗಿತ್ತು.
ಮೃತದೇಹ ಸಾಗಿಸುತ್ತಿದ್ದ ವೇಳೆ ಆ್ಯಂಬುಲೆನ್ಸ್ ಅಪಘಾತ
ಹೆಬ್ರಿಯಲ್ಲಿ ಎನ್‌ಕೌಂಟರ್‌ಗೆ ಬಲಿಯಾಗಿದ್ದ ದಲಿತ, ಆದಿವಾಸಿ ನಾಯಕ ವಿಕ್ರಂ ಗೌಡರ ಮೃತದೇಹವನ್ನು ಇಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರಕ್ಕಾಗಿ ಮಣಿಪಾಲದಿಂದ ಕೂಡ್ಲುವಿಗೆ ಕೊಂಡೊಯ್ಯುತ್ತಿದ್ದಾಗ ಹೆಬ್ರಿ ಬಳಿ ಆ್ಯಂಬುಲೆನ್ಸ್ ರಸ್ತೆ ಬದಿಗೆ ವಾಲಿದ ಘಟನೆ ನಡೆದಿತ್ತು.

ಆ್ಯಂಬುಲೆನ್ಸ್ ವೇಗವಾಗಿ ಚಲಿಸುತ್ತಿದ್ದಾಗ ದನ ರಸ್ತೆಗೆ ಅಡ್ಡ ಬಂದದ್ದರಿಂದ ರಸ್ತೆ ಬದಿಗೆ ವಾಲಿತ್ತು. ನಂತರ ಸ್ಥಳೀಯರ ನೆರವಿನಿಂದ ಆ್ಯಂಬುಲೆನ್ಸ್ ಅನ್ನು ರಸ್ತೆಗೆ ತಂದು ಮೃತದೇಹವನ್ನು ಕೂಡ್ಲು ಪ್ರದೇಶಕ್ಕೆ ಕೊಂಡೊಯ್ಯಲಾಗಿತ್ತು.
ವಿಕ್ರಂ ಗೌಡ ಹಿನ್ನೆಲೆ ಏನು?
ಉಡುಪಿ ಜಿಲ್ಲೆಯ ಕಾರ್ಕಳದ ಹೆಬ್ರಿ ಕಬ್ಬಿನಾಲೆ ಸಮೀಪದ ಸೀತಂಬೈಲು ಎಂಬಲ್ಲಿ ಸೋಮವಾರ(ನ.18) ರಾತ್ರಿ ನಡೆದ ಎಎನ್‌ಎಫ್ ಕಾರ್ಯಾಚರಣೆಯಲ್ಲಿ ಮಾವೋವಾದಿ ದಳದ ನಾಯಕ ವಿಕ್ರಂ ಗೌಡ ಹತ್ಯೆಯಾಗಿದ್ದರು.

5ನೇ ತರಗತಿ ವರೆಗೆ ಓದಿದ್ದ ವಿಕ್ರಂ, ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕೂಡ್ಲು ನಾಡ್ವಾಲು ಗ್ರಾಮದ ನಿವಾಸಿಯಾಗಿದ್ದರು. ಸಣ್ಣ ಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ನಂತರದಲ್ಲಿ ಕುದುರೆಮುಖ ಮೈನಿಂಗ್ ಕಂಪನಿಯಲ್ಲಿ ಕಾರ್ಮಿಕರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಧ್ವನಿ ಎತ್ತತೊಡಗಿದ್ದ. ಈ ವೇಳೆ ಪಶ್ಚಿಮ ಘಟ್ಟದಲ್ಲಿ ಮಾವೋವಾದಿ ಹೋರಾಟದ ಚಟುವಟಿಕೆಗಳು ಸಕ್ರಿಯವಾಗಿ ಆರಂಭವಾಗಿದ್ದವು. ಕುದುರೆಮುಖ ಉಳಿಸಿ ಹೋರಾಟದಲ್ಲಿ ಮಾವೋವಾದಿ ಸಂಪರ್ಕಕ್ಕೆ ಬಂದ ಬಳಿಕ, ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.